ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ವಾರ್ಡ್‍ಗಳ ವಿಂಗಡಣೆ – ಶಾಸಕ ರಾಮದಾಸ್

ಮೈಸೂರು, ಜೂ.25-ಬಿಜೆಪಿ ಯುವಕರನ್ನು ಹತ್ತಿಕ್ಕಲು ಮೈಸೂರಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ವಾರ್ಡ್‍ಗಳ ವಿಂಗಡಣೆ ಹಾಗೂ ಮೀಸಲಾತಿ ವರ್ಗೀಕರಣ ಮಾಡಲಾಗಿದೆ ಎಂದು ಶಾಸಕ ರಾಮದಾಸ್ ಅವರು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್‍ನವರು ವಾರ್ಡ್‍ಗಳನ್ನು ಹಂಚಿಕೊಂಡು ಕಾನೂನು ಬಾಹಿರವಾಗಿ ವಾರ್ಡ್‍ಗಳ ಮೀಸಲಾತಿ ಮಾಡಿದ್ದಾರೆ. ಜೂ.19 ರಂದು ಮೀಸಲಾತಿ ಗೆಜೆಟ್ ಪತ್ರ ಹೊರಡಿಸಲಾಗಿದೆ. ಆದರೆ ಆ ಪತ್ರ ಈವರೆಗೂ ನನಗೆ ಬಂದಿಲ್ಲ. ಸಹಿ ಇಲ್ಲದ ಒಂದು ಗೆಜೆಟ್ ಪತ್ರ ನನಗೆ ದೊರೆತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರನ್ನು ಪ್ರಶ್ನಿಸಿದಾಗ ಈ ಪತ್ರ ತಮಗೆ ತಲುಪಿಲ್ಲ ಎಂದಿದ್ದಾರೆ. ಹಾಗಿದ್ದರೆ ಈ ಪತ್ರ ಹೊರಡಿಸಿರುವುದು ಯಾರು ಎಂದು ಪ್ರಶ್ನಿಸಿದರು.
ಅವೈಜ್ಞಾನಿಕವಾಗಿ ಕ್ಷೇತ್ರ ವಿಂಗಡಣೆ ಹಾಗೂ ಮೀಸಲಾತಿ ಕುರಿತು ತಾವು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ತಕರಾರು ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಅವೈಜ್ಞಾನಿಕವಾದ ಕ್ಷೇತ್ರದ ಪುನರ್ ವಿಂಗಡಣೆಯನ್ನು ಹಾಗೂ ಮೀಸಲಾತಿಯನ್ನು ಮರು ಪರಿಶೀಲಿಸಿ ಸರಿಪಡಿಸಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರ ಬರೆಯುವುದಾಗಿ ರಾಮದಾಸ್ ಹೇಳಿದರು.
ಬಿಜೆಪಿ ಮುಖಂಡರಾದ ರಾಜೇಂದ್ರ, ಪ್ರಭಾಕರ್‍ಸಿಂಗ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ