
ಧಾರವಾಡ,ಜೂ.25- ರಾಜ್ಯ ಸರಕಾರದ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೀಡುವ ಸೌಲಭ್ಯವನ್ನು ಅನುದಾನಿತ ಖಾಸಗಿ ಪ್ರಾಥಮಿಕ ಶಿಕ್ಷಕರಿಗೂ ನೀಡಲಾಗುವುದೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಶಿಕ್ಷಕ ಸಮುದಾಯಕ್ಕೆ ಭರವಸೆ ನೀಡಿದ್ದಾರೆ.
ಧಾರವಾಡದಲ್ಲಿ ಇಂದು ಕರ್ನಾಟಕ ರಾಜ್ಯ ಅನುದಾನಿತ ಖಾಸಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ನೀಡಿದ ಮನವಿಗೆ ಸ್ಪಂದಿಸಿದ ಅವರು ಈ ಬಗ್ಗೆ ಶೀಘ್ರ ಅಧಿಕಾರಿಗಳ ಮಟ್ಟದ ಸಭೆ ಕರೆದು ಚರ್ಚಿಸಲಾಗುವುದು ಎಂದರು. ಕರ್ನಾಟಕ ರಾಜ್ಯ ಖಾಸಗಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕಳೆದ 28 ವರ್ಷಗಳಿಂದ ಶಿಕ್ಷಕರ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತಾ, ಶಿಕ್ಷಣ ಇಲಾಖೆಯ ಆದೇಶಗಳನ್ನು ಪರಿಪಾಲಿಸುತ್ತಾ ಗುಣಮಟ್ಟದ ಶಿಕ್ಷಣಕ್ಕಾಗಿ ರಚನಾತ್ಮಕ ಕಾರ್ಯಗಳನ್ನು ಮಾಡುತ್ತಿದೆ.
ಸರ್ಕಾರಿ ನೌಕರರಿಗೆ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಸಿಗುವ ಎಲ್ಲಾ ಸೌಲಭ್ಯಗಳು ಅನುದಾನಿತ ಶಾಲಾ ಸಿಬ್ಬಂದಿ ಹಾಗೂ ಮಕ್ಕಳಿಗೆ ಸಿಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬೇಡಿಕೆಗಳ ಈಡೇರಿಸುವಂತೆ ಕರ್ನಾಟಕ ರಾಜ್ಯ ಖಾಸಗಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಸಚಿವರಿಗೆ ಮನವಿ ಸಲ್ಲಿಸಿದರು. ನೆನೆಗುದಿಗೆ ಬಿದ್ದ ಕಾಲ್ಪನಿಕ ವೇತನ ಬಡ್ತಿ, ಹಳೆಯ ಪಿಂಚಿಣಿ ಯೋಜನೆ, ಅನುದಾನಿತ ಪ್ರಾಥಮಿಕ ಶಾಲಾ ಮುಖ್ಯೋಧ್ಯಾಪಕರಿಗೆ ವಿಶೇಷ ಬಡ್ತಿ ಸೌಲಭ್ಯ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿದರು.
ಸರ್ಕಾರಿ ನೌಕರರಿಗೆ ಸಿಗುವ ಬಹುತೇಕ ಸೌಲಭ್ಯಗಳು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೂ ವಿಸ್ತರಿಸುತ್ತಾ ಬಂದಿದ್ದು , ಇತ್ತೀಚಿನ ದಿನಗಳಲ್ಲಿ ಪುನಃ ಪ್ರತೇಕ ಆದೇಶ ಹೊರಡಿಸುವ ಪದ್ದತಿ ಆರಂಭವಾಗಿದೆ. ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮುಖ್ಯೋಧ್ಯಾಪಕರಿಗೆ ಒಂದು ಹೆಚ್ಚುವರಿ ವೇತನ ಬಡ್ತಿ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. 6 ಹಾಗೂ 7ನೇ ವರ್ಗಗಳಲ್ಲಿ ಶಾರೀರಿಕ ಶಿಕ್ಷಣ ಕಡ್ಡಾಯ ಹಾಗೂ ಪರೀP್ಷÁ ವಿಷಯವಾಗಿದ್ದು, ಆ ವಿಷಯ ಬೋಧನೆಗೆ ತರಬೇತಿ ಹೊಂದಿದ ಶಾರೀರಿಕ ಶಿಕ್ಷಣ ಶಿಕ್ಷಕರ ಅಗತ್ಯವಿದೆ. 7ಕ್ಕಿಂತ ಹೆಚ್ಚು ವರ್ಗಗಳಿರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಒಬ್ಬ ಗುಮಾಸ್ತ ಹಾಗೂ ಒಬ್ಬ ನಾಲ್ಕನೇ ದರ್ಜೆಯ ನೌಕರನ ನೇಮಕಾತಿಗೆ ಅವಕಾಶ ನೀಡುವಂತೆ ಕೋರಿದರು.
ಮಕ್ಕಳ ಶಿಕ್ಷಕರ ಅನುಪಾತ 40:1 ರದ್ದು ಪಡಿಸಿ 30:1 ಮಾಡುವುದು, ಸರಕಾರಿ ಶಾಲಾ ಮಕ್ಕಳಿಗೆ ಸಿಗುವ ಉಚಿತ ಸಮವಸ್ತ್ರವನ್ನು ಅನುದಾನಿತ ಶಾಲಾ ಮಕ್ಕಳಿಗೂ ಸಿಗಬೇಕು ಎಂದು ಆಗ್ರಹಿಸಲಾಯಿತು.
ಸಂಘದ ಪದಾಧಿಕಾರಿ ದಿವಾಕರ ಪುನೀತ, ವಿಲ್ಸನ್ ಜೆ. ಮೈಲಿ, ಪಿ.ಎಸ್. ಸುಧಾಮಣಿ, ಎಸ್.ಎಂ. ಯತ್ನಾಳ್, ಎ.ಎಂ. ಬೆಲ್ಲಿ, ಎಚ್.ಬಿ. ಭಜಂತ್ರಿ, ಆರ್.ಕೆ. ಬಳಗಾನೂರ, ಎಂ.ಎಚ್. ಲಿಂಗದ ಎಫ್.ಟಿ. ಕೆಮ್ಮಣಕೇರಿ, ಜಿ.ಬಿ. ಶಾನವಾಡ, ಎಸ್.ಎಂ. ಹೂಗಾರ, ಎಂ.ಸಿ. ಬಿರಾದಾರ, ಎಂ.ಬಿ. ಬೆನಪ್ಪನವರ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.