ಮುಂಬೈಯಲ್ಲಿ ಭಾರೀ ಮಳೆ: ಪ್ರತ್ಯೇಕ ಘಟನೆಗಳಲ್ಲಿ ಮೂವರ ಸಾವು

ಮುಂಬೈ: ಭಾರೀ ಮಳೆಗೆ ವಾಣಿಜ್ಯ ರಾಜಧಾನಿ ಮುಂಬೈ ತತ್ತರಿಸಿದೆ.  ಮಳೆ ಸಂಬಂಧಿ ಘಟನೆಗಳಲ್ಲಿ ಇದುವರೆಗೂ ಮೂವರು ಸಾವನ್ನಪ್ಪಿದ್ದಾರೆ.

ಇಂದು ಮುಂಜಾನೆ  ಥಾಣೆಯ ಸುತ್ತಮುತ್ತ ಸುರಿದ  ಭಾರಿ ಮಳೆಯಿಂದ   ಅಂಬರ್ ನಾಥ್ ತಾಲೂಕಿನ ಮನೆಯೊಂದರ ಗೋಡೆ ಕುಸಿದು ಬಿದ್ದು, 13 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಅವರ ಪೋಷಕರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ  ಪ್ರಾದೇಶಿಕ ವಿಪತ್ತು ನಿರ್ವಹಣಾ ಕೇಂದ್ರದ  ಮುಖ್ಯಸ್ಥ ಸಂತೋಷ್ ಕದಂ ತಿಳಿಸಿದ್ದಾರೆ.

ನಿನ್ನೆ ಸಂಜೆ  ದಕ್ಷಿಣ ಮುಂಬೈಯ ಮೆಟ್ರೋ ಸಿನಿಮಾ ಬಳಿ ಮರವೊಂದು ಕೆಳಗೆ ಬಿದ್ದು,  ಇಬ್ಬರು ಸಾವನ್ನಪ್ಪಿದ್ದರು.

ಮತ್ತೊಂದು ಘಟನೆಯಲ್ಲಿ ಇಂದು ಮುಂಜಾನೆ ಠಾಣೆಯಲ್ಲಿನ  ವಸತಿ ಸಂಕೀರ್ಣವೊಂದರ  ಕಾಂಪೌಂಡು ಗೋಡೆ ಕುಸಿದು ಎರಡು ಕಾರು  ಮತ್ತೊಂದು  ವಾಹನ  ಜಖಂಗೊಂಡಿದೆ ಎಂದು ಅವರು ಹೇಳಿದ್ದಾರೆ.

ಮುಂಬೈಯ ವಾಡಾಲಾದಲ್ಲಿನ ಅಂತೊಪ್ ಹಿಲ್ ಪ್ರದೇಶದ ಬಳಿಯ ದೊಡ್ಡ ಕೌಂಪೌಡ್ ನ ಇಟ್ಟಿಗೆ ಬಿದ್ದು,  ಸುಮಾರು 15 ಕಾರುಗಳು ಹಾನಿಯಾಹಿವೆ ಎಂದು ಬೃಹನ್ ಮಹಾನಗರ ಪಾಲಿಕೆ ವಿಪತ್ತು ನಿರ್ವಹಣಾ ಘಟಕ ಹೇಳಿದೆ. ಆದರೆ, ಯಾವುದೇ  ಪ್ರಾಣಹಾನಿಯಂತಹ ಘಟನೆಗಳು ಸಂಭವಿಸಿಲ್ಲ.

ಮಹೇಶ್ವರಿ ಉದ್ಯಾನ್ ಸಿಯಾನ್ ರಸ್ತೆಯ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲಾಗಿದ್ದು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.

ವರುಣನ ಅಬ್ಬರಿಂದಾಗಿ ರಸ್ತೆ ಹಾಗೂ ರೈಲು ಸಂಚಾರದಲ್ಲಿ ವ್ಯತ್ಯಯಗೊಂಡಿದ್ದು, ಜನಜೀವನ  ಅಸ್ತವ್ಯಸ್ತಗೊಂಡಿದೆ.. ಪ್ರಮುಖ ವೃತ್ತಗಳು ಜಲಾವೃತಗೊಂಡಿದ್ದು, ವಾಹನ ಸವಾರರು ತೀವ್ರ ತೊಂದರೆ ಎದುರಿಸುವಂತಾಗಿದೆ.

ವಾರಾಂತ್ಯದವರೆಗೂ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಲಬಾರ್ ಹಿಲ್,  ಹಿಂದ್ ಮತ, ದಾರಾವಿ ಬೈಕುಲಾ, ದಾದಾರ್,  ಸೇರಿದಂತೆ ಹಲವು  ಕಡೆಗಳಲ್ಲಿ ಜಲಾವೃತ್ತವಾಗಿದ್ದು,  ಸ್ಥಳೀಯ ರೈಲು ಸೇವೆಯಲ್ಲಿ ಇಂದು ಬೆಳಿಗ್ಗೆ 20 ನಿಮಿಷಗಳ ಕಾಲ ವ್ಯತ್ಯಯಗೊಂಡಿತ್ತು.

ಕೊಲಾಬಾದಲ್ಲಿ 90 ಮಿ. ಮೀ. ಸಾಂತಾಕ್ರೂಜ್ ನಲ್ಲಿ ಬೆಳಿಗ್ಗೆ  ದಾಖಲೆಯ 195 ಮಿ. ಮೀಟರ್ ಮಳೆಯಾಗಿದೆ. ವಿರಾರ್, ಸೂರತ್, ಬಾಂದ್ರಾ, ದಾದರ್ ಸೇರಿದಂತೆ ಮತ್ತಿತರ ಭಾರೀ ಮಳೆಯಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ