ಬೆಂಗಳೂರು:ಜೂ-25: ಕಾಂಗ್ರೆಸ್,ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡದಿದ್ದಕ್ಕೆ ಏನೂ ಬೇಸರವಿಲ್ಲ.ಆದರೆ ನಿಗಮಮಂಡಲಿ ಅಧ್ಯಕ್ಷ ಸ್ಥಾನ ನೀಡುವಂತೆ ಪಕ್ಷದ ಹೈಕಮಾಂಡ್ ನ್ನು ಕೇಳಿಕೊಂಡಿದ್ದೀನಿ ಎಂದು ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಹೇಳಿದ್ದಾರೆ.
ತಾಲೂಕಿನ ಶಾಸಕರಾಗಿ ಎರಡನೇ ಬಾರಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ಕೆ ತಾಲೂಕಿನ ರಾಜಘಟ್ಟ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಕಾರಣ ಸಮ್ಮಿಶ್ರ ಸರ್ಕಾರ ರಚನೆಯಾಗಿರುವುದು. ಸಧ್ಯ ನನಗೆ ಸಚಿವ ಸ್ಥಾನಕ್ಕಿಂತ ತಾಲೂಕಿನ ಅಭಿವೃದ್ಧಿ ಮುಖ್ಯ.ಆದ್ದರಿಂದ ತಾಲೂಕಿಗೆ ಮೆಡಿಕಲ್ ಕಾಲೇಜು,ಪಾಲಿಟೆಕ್ನಿಕ್ ಕಾಲೇಜು,ನರ್ಸಿಂಗ್ ತರಬೇತಿ ಕಾಲೇಜು ಮಂಜೂರು ಮಾಡುವಂತೆ ಕೇಳಿದ್ದೀನಿ.ನನ್ನ ಮೇಲೆ ನಂಬಿಕೆ ಇಟ್ಟು ಎರಡನೇ ಬಾರಿ ಹೆಚ್ಚು ಮತಗಳಿಂದ ಗೆಲ್ಲಿಸಿದ ಮತದಾರರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಆಡಳಿತ ನಡೆಸುತ್ತೇನೆಂದರು.
ರಾಜಘಟ್ಟ ಗ್ರಾಮದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಹಾಜರಾಗಿ ಸರ್ಕಾರದ ಹೋಜನೆಯಡಿ ಫಲಾನುಭವಿಗಳಿಗೆ ಗ್ಯಾಸ್ ಸ್ಟೌ ವಿತರಿಸಿದರು.ಇದೇ ಸಂದರ್ಭದಲ್ಲಿ ರಾಜಘಟ್ಟ ಕಾಂಗ್ರೆಸ್ ಕಾರ್ಯಕರ್ತರು ಶಾಸಕರನ್ನು ಅಭಿನಂದಿಸಿದರು.