ಬಾಂಬ್ ದಾಳಿಯಲ್ಲಿ ಉಪಾಧ್ಯಕ್ಷ ಕೆಂಬೋ ಮೊಹಾಡಿ ತೀವ್ರ ಗಾಯ

ಹರಾರೆ, ಜೂ.24- ಬುಲಾವಾಯೋದಲ್ಲಿ ಜಿಂಬಾಬ್ವೆ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುತ್ತಿದ್ದ ರ್ಯಾಲಿ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಉಪಾಧ್ಯಕ್ಷ ಕೆಂಬೋ ಮೊಹಾಡಿ ತೀವ್ರ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಈ ದಾಳಿಯಲ್ಲಿ ಉಪಾಧ್ಯಕ್ಷರ ಪತ್ನಿ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ. ಇಥಿಯೋಪಿಯಾ ಪ್ರಧಾನಮಂತ್ರಿ ರ್ಯಾಲಿ ವೇಳೆ ನಡೆದ ಗ್ರೆನೇಡ್ ಸ್ಫೋಟ ಮಾದರಿಯಲ್ಲೇ ಜಿಂಬಾಬ್ವೆಯಲ್ಲೂ ಬಾಂಬ್ ದಾಳಿ ನಡೆದಿದೆ. ರಾಜಧಾನಿ ಹರಾರೆಯ ವೈಟ್ ಸಿಟಿ ಮೈದಾನದಲ್ಲಿ ಬೃಹತ್ ರ್ಯಾಲಿ ನಡೆಯುತ್ತಿತ್ತು. ಈ ಸಾರ್ವಜನಿಕ ಕಾರ್ಯಕ್ರಮದಲ್ಲಿ ಜಿಂಬಾಬ್ವೆ ಅಧ್ಯಕ್ಷ ಎಮ್ಮರ್ಸನ್ ಪಾಲ್ಗೊಂಡಿದ್ದರು. ಜನರನ್ನು ಉದ್ದೇಶಿಸಿ ಮಾತನಾಡಿದ ನಂತರ ಎಮ್ಮರ್ಸನ್ ಕಾರ್ಯಕರ್ತರ ಬಳಿ ತೆರಳಿದರು. ಬಳಿಕ ವೇದಿಕೆ ಮೇಲೆ ದುಷ್ಕರ್ಮಿಗಳು ಬಾಂಬ್ ಎಸೆದರು. ಈ ದಾಳಿಯಲ್ಲಿ ಉಪಾಧ್ಯಕ್ಷ ಕೆಂಬೋ ಮೊಹಾಡಿ ಅವರ ಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಸ್ಥಿತಿ ಶೋಚನೀಯವಾಗಿದೆ ಎಂದು ಮೂಲಗಳು ಹೇಳಿವೆ. ಬಾಂಬ್ ದಾಳಿಯಲ್ಲಿ ಗಾಯಗೊಂಡಿರುವ ಉಪಾಧ್ಯಕ್ಷರ ಪತ್ನಿ ಸೇರಿದಂತೆ 10ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ