
ಬೆಳಗಾವಿ, ಜೂ.24- ಅನಾರೋಗ್ಯದಿಂದ ಬಳಲಿ ದಯಾಮರಣಕ್ಕೆ ಅರ್ಜಿ ಬರೆದಿದ್ದ ರೈತ ಜಿಲ್ಲಾಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಲಿಂಗನಮಠ ಗ್ರಾಮದ ರೈತ ಶಂಕರ ಮಾಟೋಳಿ ಮೃತ ರೈತನಾಗಿದ್ದು , ಅನಾರೋಗ್ಯ ನಿಮಿತ್ತ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಕಬ್ಬು ಬೆಳೆಗಾರರಾಗಿದ್ದ ಇವರು ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ನೀಡಿದ್ದರು. ಆದರೆ ಅವರಿಗೆ ಬರಬೇಕಾಗಿದ್ದ ಹಣ ಮಾತ್ರ ಬಂದಿರಲಿಲ್ಲ. ಹಲವು ಹೋರಾಟಗಳಲ್ಲಿ ತೊಡಗಿ ಸತತ ಪ್ರಯತ್ನ ಪಟ್ಟರೂ ಬಾಕಿ ಹಣ ಸಂದಾಯವಾಗಿರಲಿಲ್ಲ. ಇದರಿಂದ ನೊಂದು ಇತ್ತೀಚೆಗೆ ಶಂಕರ ಮಾಟೋಳಿ ಅವರು ದಯಾ ಮರಣಕ್ಕೆ ಕೋರಿ ಪ್ರಧಾನ ಮಂತ್ರಿ ಮೋದಿ, ಸಿಎಂ ಕುಮಾರಸ್ವಾಮಿಗೆ ಪತ್ರ
ಬರೆದಿದ್ದರು. ಸಚಿವ ರಮೇಶ್ ಜಾರಕಿಹೊಳಿ ಒಡೆತನದ ಹಿರೇನಂದಿ ಸಕ್ಕರೆ ಕಾರ್ಖಾನೆಯಿಂದ ಲಾರಿ ಬಾಡಿಗೆ 1 ಲಕ್ಷ ಹಣ ನೀಡಿಲ್ಲ ,ಶಿವಸಾಗರ ಸಕ್ಕರೆ ಕಾರ್ಖಾನೆಯಿಂದ ಕಬ್ಬಿನ ಹಣ ಬಾಕಿ 50,000 ಎಂದು ಮಾಟೋಳಿ ಅವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದರು.
ಕೊನೆಗೆ ಎಚ್ಚೆತ್ತಿದ್ದ ಅಧಿಕಾರಿಗಳು ರೈತನ ನೆರವಿಗೆ ಧಾವಿಸಿದರು. ಉಪವಿಭಾಗಾಧಿಕಾರಿ ಅವರು ಇತ್ತೀಚೆಗೆ ಮಾಟೋಳಿ ಅವರನ್ನು ಸಮಾಧಾನ ಪಡಿಸಿ ಬಿಲ್ ಅನ್ನು ನೀಡಿದ್ದರು ಎಂದು ಹೇಳಲಾಗಿದೆ.