ಕುಣಿಗಲ್,ಜೂ.24- ಪ್ರತಿಷ್ಠಿತ ಬಿದನಗೆರೆ ಸಮೀಪವಿರುವ ಶನೇಶ್ವರ ದೇವಾಲಯದ ಅರ್ಚಕರನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಬಂಧಿಸಿರುವ ಪೆÇಲೀಸರು 4.5 ಲಕ್ಷ ನಗದು, ಮೂರು ಕಾರುಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದೀಪು, ಹೇಮಂತ್‍ಕುಮಾರ್, ಮಿತಿನ್, ಭರತ್, ಸಂತೋಷ್, ನಂದೀಶ, ವೆಂಕಟೇಶ್ ನಾಯಕ್, ವಿನಯ್, ಜಗದೀಶ್, ಶಿವು, ಚಾದರ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳ ಪೈಕಿ ದೀಪು ತಾಲ್ಲೂಕಿನ ಕೊತ್ತಿಗೆರೆ ಹೋಬಳಿ, ಮಡಿಕೆ ಹಳ್ಳಿ ಗ್ರಾಮದವನಾಗಿದ್ದು , ಕೈಗಾರಿಕಾ ವಸಾಹತು ಪ್ರದೇಶ ಅಂಚೆ ಪಾಳ್ಯದಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದನು.
ಈತನಿಗೆ ಇದೇ ತಿಂಗಳು ಮದುವೆ ನಿಶ್ಚಯ ಕೂಡ ಆಗಿತ್ತು. ದೀಪು ದೇವಸ್ಥಾನದ ಎಲ್ಲ ವಿಚಾರಗಳನ್ನು ತಿಳಿದಿದ್ದು , ಈತನಿಗೆ ಮೋಜು-ಮಸ್ತಿಯ ಖಯ್ಯಾಲಿ ಕೂಡ ಇತ್ತು.
ಬೆಂಗಳೂರಿನ ಮಹದೇಶ್ವರನಗರದ ಅಂತಿಮ ಬಿಎ ವಿದ್ಯಾರ್ಥಿ ನಂದೀಶ್ ಹಾಗೂ ಈತನ ಸ್ನೇಹಿತರಿಗೆ ಬೇಗ ದುಡ್ಡು ಮಾಡುವ ಆಸೆ ಇತ್ತು. ಇದರಿಂದ ಅರ್ಚಕರನ್ನು ದರೋಡೆ ಮಾಡುವ ಸಂಚು ರೂಪಿಸಿದ್ದಾರೆ.
ದೀಪುಗೆ ಶನಿಶ್ಚರ ದೇವಸ್ಥಾನದಲ್ಲಿ ಹಣದ ವಹಿವಾಟಿನ ಬಗ್ಗೆ ಅರಿವಿದ್ದರಿಂದ ಮೂರು ದಿನದ ಮುಂಚಿತವಾಗಿಯೇ ಆರೋಪಿಗಳು ಒಂದೆಡೆ ಸೇರಿ ದೇವಸ್ಥಾನದಲ್ಲಿ ಎಲ್ಲ ಚಟುವಟಿಕೆ ಹಾಗೂ ಅರ್ಚಕರ ಚಲನವಲನಗಳನ್ನು ಗಮನಿಸಿದ್ದಾರೆ.
ಜೂ.9ರ ರಾತ್ರಿ ಭಕ್ತಾದಿಗಳು ನೀಡಿದ ಕಾಣಿಕೆ ಹಣವನ್ನು ತೆಗೆದುಕೊಂಡು ಧನಂಜಯ್ ಸ್ವಾಮೀಜಿ ಅವರು ಕಾರಿನಲ್ಲಿ ಹೊರಟಿದ್ದಾರೆ. ಈ ವೇಳೆ ಆರೋಪಿಗಳು ರಾಷ್ಟ್ರೀಯ ಹೆದ್ದಾರಿ 48ರ ಹೊಸರಂಗಯ್ಯನ ಪಾಳ್ಯ ಸಮೀಪ ಕಾರನ್ನು ಅಡ್ಡಗಟ್ಟಿ ಚಾಲಕ ಮತ್ತು ಸ್ವಾಮೀಜಿಯ ಮೇಲೆ ಹಲ್ಲೆ ನಡೆಸಿ ರಾಸಾಯನಿಕವನ್ನು ಸಿಂಪಡಿಸಿ ಕಾರು ಸಮೇತ ಪರಾರಿಯಾಗಿದ್ದಾರೆ.
ಕಾರಿನಲ್ಲಿದ್ದ 13 ಲಕ್ಷ ಹಣವನ್ನು ದೋಚಿದ ಆರೋಪಿಗಳು ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್ ಕಾರನ್ನು ಬಿಟ್ಟು ಗೋವಾಗೆ ತೆರಳಿದ್ದಾರೆ.
ಈ ವಿಷಯ ತಿಳಿದ ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿ ದಿವ್ಯಾಗೋಪಿನಾಥ್ ನೇತೃತ್ವದಲ್ಲಿ ಡಿವೈಎಸ್ಪಿ ವೆಂಕಟೇಶ್, ಸಿಪಿಐ ಅಶೋಕ್‍ಕುಮಾರ್, ಪಿಎಸ್‍ಐಗಳಾದ ಪುಟ್ಟೇಗೌಡ, ಅನಿಲ್‍ಕುಮಾರ್, ಮಂಜು ಮೋಜುಮಸ್ತಿಯಲ್ಲಿದ್ದ ಈ ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಿಂದ ನಾಲ್ಕೂವರೆ ಲಕ್ಷ ನಗದು, ಮೂರು ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.