ಬೆಂಗಳೂರು, ಜೂ.24- ಪರಿಸರ ಸಂರಕ್ಷಣೆಯಲ್ಲಿ ಯುವ ಜನತೆಯ ಪಾಲ್ಗೊಳ್ಳುವಿಕೆ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅದಮ್ಯ ಚೇತನ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತಕುಮಾರ್ ಹೇಳಿದರು.
ನಗರದ ನ್ಯಾಷನಲ್ ಡೈರಿ ಇನ್ಸಿಟ್ಯೂಟ್ ಆವರಣದಲ್ಲಿ ಆಯೋಜಿಸಿದ್ದ 130 ನೇ ಹಸಿರು ಭಾನುವಾರ – ಸಸ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ನಗರವನ್ನು ಮತ್ತೆ ತನ್ನ ಹಳೆಯ ವೈಭವಕ್ಕೆ ತಗೆದುಕೊಂಡು ಹೋಗುವುದು ನಮ್ಮ ಗುರಿಯಾಗಿದೆ ಎಂದರು.
ಬೆಂಗಳೂರು ನಗರದಲ್ಲಿ ಮರಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಇದರಿಂದಾಗಿ ನಗರದ ಮಾಲಿನ್ಯ ಹೆಚ್ಚಾಗುತ್ತಿದ್ದು, ಮರಗಳ ಸಂಖ್ಯೆಯನ್ನು ಹೆಚ್ಚಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ನಗರದ ಪರಿಸರಕ್ಕೆ ಸಣ್ಣ ಕೊಡುಗೆಯನ್ನು ನೀಡಬೇಕು ಎನ್ನುವುದು ನಮ್ಮ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಸ್ಯಾಗ್ರಹ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮ ಪ್ರತಿವಾರ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ನಗರದಾದ್ಯಂತ ಒಂದು ಕೋಟಿ ಮರಗಳನ್ನು ಬೆಳೆಸುವುದು ನಮ್ಮ ಈ ಕಾರ್ಯಕ್ರಮದ ಗುರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಗಿಡಗಳನ್ನು ನಡೆಲಾಯಿತು. ಈ ಸಂದರ್ಭದಲ್ಲಿ ಡಾ.ರಮೇಶ್, ಜಕ್ಕಸಂದ್ರ ಬಿಬಿಎಂಪಿ ಸದಸ್ಯೆ ಸರಸ್ವತಮ್ಮ, ಮುಖಂಡರಾದ ಲಲ್ಲೇಶ್ ರೆಡ್ಡಿ, ನರಹರಿ ಭಡ್ಕೆ ಸೇರಿದಂತೆ ಹಲವರು ಭಾಗವಹಿಸಿದ್ದರು.