ನವದೆಹಲಿ, ಜೂ.24-ಹಿಂಸಾಚಾರ ಮತ್ತು ಕ್ರೂರತ್ವದಿಂದ ಯಾವುದೇ ಸಮಸ್ಯೆ ಬಗೆಹರಿಯದು ಎಂದು ವ್ಯಾಖ್ಯಾನಿಸಿರುವ ಪ್ರಧಾನಿ ನರೇಂದ್ರ ಮೋದಿ, ಶಾಂತಿ ಮತ್ತು ಅಹಿಂಸೆಗೆ ಸದಾ ಜಯ ಎಂದು ಹೇಳಿದ್ದಾರೆ.
ತಮ್ಮ 45ನೇ ಮನ್ ಕಿ ಬಾತ್ ರೇಡಿಯೋ ಭಾಷಣದಲ್ಲಿ ಶಾಂತಿ ಮಂತ್ರ ಪಠಿಸಿದ ಮೋದಿ, ಗುರು ನಾನಕ್ ದೇವ್ ಮತ್ತು ಮಹಾತ್ಮ ಕಬೀರ್ ದಾಸ್ ಅವರನ್ನು ಉಲ್ಲೇಖಿಸಿದರು. ಈ ಮಹಾಪುರುಷರು ಸಾಮಾಜಿಕ ಸೌಹಾರ್ದತೆಗಾಗಿ ಶ್ರಮಿಸಿ ಜಾತೀಯತೆ ವಿರುದ್ಧ ಹೋರಾಡಿದರು ಎಂದು ಗುಣಗಾನ ಮಾಡಿದರು.
ಭಾರತದ ಏಕತೆ ಮತ್ತು ಸಮಗ್ರತೆಗಾಗಿ ಶ್ರಮಿಸಿದ ಭಾರತೀಯ ಜನ ಸಂಘದ ಸಂಸ್ಥಾಪಕ ಶ್ಯಾಂ ಪ್ರಸಾದ್ ಮುಖರ್ಜಿ ಅವರ ಸಾಧನೆಯನ್ನೂ ಸಹ ಪ್ರಧಾನಿ ಕೊಂಡಾಡಿದರು.
ಜಲಿಯನ್ವಾಲಾ ಭಾಗ್ ಹತ್ಯಾಕಾಂಡವನ್ನು ಪ್ರಸ್ತಾಪಿಸಿದ ಅವರು -ಹಿಂಸಾಚಾರ ಮತ್ತು ಕ್ರೂರತ್ವದಿಂದ ಯಾವುದೇ ಸಮಸ್ಯೆ ಬಗೆಹರಿಯದು ಎಂಬ ಪಾಠವನ್ನು ಈ ಘಟನೆಯಿಂದ ಕಲಿಯಬಹುದು. ಶಾಂತಿ ಮತ್ತು ಅಹಿಂಸೆ, ತ್ಯಾಗ ಮತ್ತು ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ಈ ತತ್ತ್ವಗಳಿಗೆ ಸದಾ ಜಯ ಎಂದು ವಿಶ್ಲೇಷಿಸಿದರು.
ಕ್ರೀಡೆಗಳಿಂದ ದೇಶಗಳ ಬೆಸುಗೆ: ಕ್ರೀಡೆಗಳು ದೇಶಗಳು ಮತ್ತು ಮನುಷ್ಯರನ್ನು ಪರಸ್ಪರ ಬೆಸೆಯಲು ಸಹಕಾರಿ. ಯೋಗಾಸನ ಸಹ ವಿಶ್ವವನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈಗ ಯೋಗವು ವೆಲ್ನೆಸ್ (ಸೌಖ್ಯ) ಅಭಿಯಾನವಾಗಿ ಲೋಕಪ್ರಿಯವಾಗುತ್ತಿದೆ ಎಂದು ಮೋದಿ ಬಣ್ಣಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಭಾರತ ಮತ್ತು ಆಫ್ಘಾನಿಸ್ಥಾನದ ನಡುವೆ ನಡೆದ ಕ್ರಿಕೆಟ್ ಟೆಸ್ಟ್ ಪಂದ್ಯ ಎರಡೂ ದೇಶಗಳ ಬಾಂಧವ್ಯ ಬೆಸುಗೆಯಲ್ಲಿ ನೆರವಾಗಿದೆ. ಇಂತಹ ಕ್ರೀಡೆಗಳಿಂದ ದೇಶಗಳು ಮತ್ತು ಜನರ ನಡುವೆ ಪರಸ್ಪರ ಬೆಸುಗೆ ವೃದ್ಧಿಯಾಗುತ್ತದೆ ಎಂದು ಮೋದಿ ವಿಶ್ಲೇಷಿಸಿದರು.
ಜುಲೈ 1ರಂದು ಅಂತಾರಾಷ್ಟ್ರೀಯ ವೈದ್ಯರ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಪ್ರತಿ ತಿಂಗಳ ಮಾಸಾಂತ್ಯದಲ್ಲಿ ಮೋದಿ ಅವರು ನಡೆಸಿಕೊಡುವ ಮನ್ ಕಿ ಬಾತ್, ಬಾನುಲಿ ಭಾಷಣ, ಪ್ರಚಲಿತ ವಿದ್ಯಮಾನಗಳು ಮತ್ತು ಸಾರ್ವಜನಿಕ ಉಪಯುಕ್ತ ಮಾಹಿತಿಗಳಿಂದ ಮಾಸದಿಂದ ಮಾಸಕ್ಕೆ ಅಪಾರ ಜನಪ್ರಿಯತೆ ಪಡೆಯುತ್ತಿದೆ.