ಹಾಲಿ ಚಾಂಪಿಯನ್ ಜರ್ಮನಿ ಬಲಿಷ್ಠ ಸ್ವೀಡನ್ ವಿರುದ್ಧ 2-1 ಗೋಲಿನ ರೋಚಕ ಜಯ

ಸೋಚಿ, ಜೂ.24-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಲೀಗ್ ಹಂತದ ಎಫ್ ಗ್ರೂಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ಬಲಿಷ್ಠ ಸ್ವೀಡನ್ ವಿರುದ್ಧ 2-1 ಗೋಲಿನ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಜರ್ಮನಿ ತಂಡದ ಪ್ರಿ ಕ್ವಾರ್ಟರ್ ಹಾದಿ ಇನ್ನೂ ಜೀವಂತವಾಗಿದೆ.
ಫಿಶ್ಸ್ ಸ್ಟೇಡಿಯಂನಲ್ಲಿ ನಡೆದ ಜರ್ಮನ್ ಮತ್ತು ಸ್ವೀಡನ್ ನಡುವಣ ಕಾಲ್ಚೆಂಡಿನ ಹಣಾಹಣಿಯಲ್ಲಿ ಅಂತಿಮ ಕ್ಷಣದವರೆಗು ಗೆಲುವಿಗೆ ಅಡ್ಡಿಯಾಗಿದ್ದ ಸ್ವೀಡನ್‍ನಿಂದ ಜರ್ಮನಿಯ ಟೋನಿ ಕ್ರೂಸ್ ಫ್ರೀ ಕಿಕ್ ಮೂಲಕ ಗೆಲುವು ಕಸಿದು, ತಂಡಕ್ಕೆ ಆಪದ್ಭಾಂಧವನಾದರು.
ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾದ ಜರ್ಮನಿಗೆ ಪಂದ್ಯದ 3ನೆ ನಿಮಿಷದಲ್ಲೇ ಗೋಲು ಬಾರಿಸುವ ಅವಕಾಶ ಲಭಿಸಿತ್ತು. ಆದರೆ ಆ ಯತ್ನವನ್ನು ಸ್ವೀಡನ್ ಗೋಲ್ ಕೀಪರ್ ರಾಬಿಲ್ ಓಲ್ಸೆನ್ ತಪ್ಪಿಸಿದರು. ಬಳಿಕ 22ನೆ ನಿಮಿಷದಲ್ಲೂ ಜರ್ಮನಿಗೆ ಲಭಿಸಿದ ಇನ್ನೊಂದು ಅವಕಾಶವೂ ತಪ್ಪಿತು. ಪುನ: ರಾಬಿಲ್ ಜರ್ಮನಿ ಗೋಲು ಖಾತೆ ತೆರೆಯುವ ಸಾಧ್ಯತೆಯನ್ನು ಯಶಸ್ವಿಯಾಗಿ ತಪ್ಪಿಸಿದರು.
ರೋಚಕ ಪಂದ್ಯದ 32ನೇ ನಿಮಿಷದಲ್ಲಿ ಸ್ವೀಡನ್‍ನ ಓಲಾ ಟೋವೊನೆನ್ ಗೋಲು ಬಾರಿಸಿ ತಂಡ ಮೇಲುಗೈ ಸಾಧಿಸುವಂತೆ ಮಾಡಿದರು.
ಪಂದ್ಯದ ಮೊದಲಾರ್ಧ ಅವಧಿ ಮುಕ್ತಾಯಕ್ಕೂ ಮುನ್ನ ಎರಡು ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತು. ಈ ಸಂದರ್ಭದಲ್ಲಿ 45ನೇ ನಿಮಿಷದಲ್ಲಿ ಸ್ವೀಡನ್ ಎರಡನೇ ಗೋಲು ಬಾರಿಸುವುದರಲ್ಲಿತ್ತು. ಆದರೆ ಜರ್ಮನಿಯ ಗೋಲ್ ಕೀಪರ್ ಮ್ಯಾನುಯೆಲ್ ನ್ಯೂಯರ್ ತಡೆಗೋಡೆಯಾಗಿ ತಂಡವನ್ನು ರಕ್ಷಿಸಿದರು.
ನಂತರ 48ನೇ ನಿಮಿಷದಲ್ಲಿ ಮಾರ್ಕೋ ರೀಸ್ ಅವರು ಗೋಲು ಬಾರಿಸಿ ಜರ್ಮನಿ ಅಂಕವನ್ನು 1-1ರಲ್ಲಿ ಸಮಗೊಳಿಸಿದರು. ಸಮಯ ಮುಕ್ತಾಯ ವೇಳೆ ಎರಡೂ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದರಿಂದ ಪಂದ್ಯವನ್ನು 5 ನಿಮಿಷಗಳಿಗೆ ವಿಸ್ತರಣೆ ಮಾಡಲಾಯಿತು. ಹೆಚ್ಚುವರಿ ಸಮಯದಲ್ಲಿ ಎರಡೂ ತಂಡಗಳೂ ಅಕ್ರಮಣಕಾರಿ ಆಟಕ್ಕೆ ಮುಂದಾಗಿ ಗೋಲು ಬಾರಿಸಲು ಪೈಪೆÇೀಟಿ ನಡೆಸಿತು. ಅಂತಿಮ ಕ್ಷಣದಲ್ಲಿ ದಕ್ಕಿತ ಅವಕಾಶವನ್ನು ಜರ್ಮನಿ ಸದ್ಭಳಕೆ ಮಾಡಿಕೊಂಡಿತು.
ಆರ್ಮನಿ ಪರ ಆಪದ್ಭಾಂಧವ ಎಂದೇ ಖ್ಯಾತಿ ಗಳಿಸಿರುವ ಟೋನಿ ಕ್ರೂಸ್ ಮತ್ತೆ ತಂಡಕ್ಕೆ ವರವಾದರು. ಅಂತಿಮ ಕ್ಷಣದಲ್ಲಿ ಫ್ರೀ-ಕಿಕ್ ಮೂಲಕ ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಸ್ವೀಡನ್ ವೀರೋಚಿತ ಸೋಲು ಕಂಡಿತು. ಇದರೊಂದಿಗೆ ಚಾಂಪಿಯನ್ ಜರ್ಮನಿಯ 16ರ ಹಂತ ಪ್ರವೇಶದ ಹಾದಿ ಸಜೀವವಾಗಿದೆ.
ವಿಜಯೋತ್ಸವ: ಕ್ರೂಸ್ ಗೋಲು ಬಾರಿಸುತ್ತಿದ್ದಂತೆ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಕುಣಿದು ಕುಪ್ಪಳಿಸಿ ವಿಜಯೋತ್ಸವ ಆಚರಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ