ಬೆಂಗಳೂರು, ಜೂ.24- ಹತ್ತು ವರ್ಷದ ಯುಪಿಎ ಆಡಳಿತಾವಧಿಯಲ್ಲಿ ಮಿತಿಮೀರಿದ ಭ್ರಷ್ಟಾಚಾರದಿಂದ ದೇಶ ಕುಸಿದಿತ್ತು. ಆದರೆ, ಇಂದು ದೇಶದ ಚಿತ್ರಣವೇ ಬದಲಾಗಿದೆ. ನರೇಂದ್ರ ಮೋದಿ ಅವರ ಸಮರ್ಥ ಆಡಳಿತದಿಂದ ವಿದೇಶಾಂಗ ನೀತಿಗಳು ವಿಶ್ವದಲ್ಲೇ ಮನ್ನಣೆ ಪಡೆದಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದರು.
ನಗರದ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸರ್ಕಾರದ ನಾಲ್ಕು ವರ್ಷದ ಸಾಧನೆ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದರು.
ಅಧಿಕಾರಕ್ಕೆ ಬಂದಾಗ ಬಿಜೆಪಿ ದೇಶದ ಆರು ರಾಜ್ಯಗಳಲ್ಲಿ ಆಡಳಿತ ನಡೆಸಿತ್ತು. ಇಂದು 20 ರಾಜ್ಯಗಳಲ್ಲಿ ಬಿಜೆಪಿ ತನ್ನ ಚುಕ್ಕಾಣಿ ಹಿಡಿದಿದೆ ಎಂದು ನುಡಿದರು.
ಅಂದಿನ ಮಿತಿಮೀರಿದ ಭ್ರಷ್ಟಾಚಾರದ ಯುಪಿಎ ಆಡಳಿತ ಹೇಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಇಂದು ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಆಡಳಿತ ನಡೆದಿರುವ ಬಗ್ಗೆಯೂ ತಿಳಿದಿದೆ. ದೇಶದ ಆರ್ಥಿಕತೆಯೂ ಸುಭದ್ರವಾಗಿದೆ. ದೇಶದ ಬೆಳವಣಿಗೆಯಿಂದ ಇಂದು ವಿಶ್ವದಲ್ಲೇ ನಮ್ಮ ರಾಷ್ಟ್ರ ಗೌರವಕ್ಕೆ ಪಾತ್ರವಾಗಿದೆ ಎಂದರು.
ನರೇಂದ್ರ ಮೋದಿ ಅವರ ಅಧಿಕಾರ ತಡೆಯಲು ವಿರೋಧ ಪಕ್ಷಗಳು ಒಗ್ಗೂಡುತ್ತಿವೆ. ಪರಸ್ಪರ ಗಂಭೀರ ಆರೋಪ ಮಾಡಿಕೊಳ್ಳುವ ಪಕ್ಷಗಳೂ ಸಹ ಇಂದು ಮೋದಿ ಅವರ ಭಯದಿಂದಾಗಿ ಒಂದಾಗುತ್ತಿವೆ. ಆದರೆ ನಾವು ಅದಕ್ಕೆಲ್ಲ ಚಿಂತಿಸುವುದಿಲ್ಲ. ನಮಗೆ ಜನಬಲವಿದೆ. ಜತೆಗೆ ದೈವಬಲವೂ ಇದೆ ಎಂದು ಹೇಳಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣೆ ಸಮಯದಲ್ಲಿ ಅನೇಕ ಭರವಸೆಗಳನ್ನು ನೀಡಿದ್ದರು. ಅದಕ್ಕಾಗಿಯೇ ಜನ ಅವರನ್ನು ನಂಬಿ 37 ಸೀಟುಗಳನ್ನು ಕೊಟ್ಟಿದ್ದರು. ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ಭರವಸೆ ಈಡೇರಿಸುವ ಮಾತಿಗಾಗಿ ಜನ ಕಾಯುತ್ತಿದ್ದರು. ಆದರೆ, ಅದು ಆಗಿಲ್ಲ. ಆ ಎಲ್ಲ ಭರವಸೆಗಳನ್ನೂ ಮುಖ್ಯಮಂತ್ರಿ ಈಡೇರಿಸಲಿ. ನಾವು ಅದಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.
ಕಾವೇರಿ ವಿಚಾರದಲ್ಲಿ ನಾವು ರಾಜ್ಯ ಸರ್ಕಾರದ ಪರ ಇದ್ದೇವೆ ಎಂದು ಯಡಿಯೂರಪ್ಪ ಘೋಷಿಸಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ರಚನೆ ವಿಚಾರದಲ್ಲಿ ಹಿಂದಿನ ಸರ್ಕಾರವೂ ಕ್ರಮ ಕೈಗೊಳ್ಳಲಿಲ್ಲ, ಈಗಿನ ಸರ್ಕಾರವೂ ಎಚ್ಚರ ವಹಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರಿಗೆ ಅನ್ಯಾಯವಾಗದಂತೆ ಸರ್ಕಾರ ಹೆಜ್ಜೆ ಇಡಬೇಕು. ರಾಜ್ಯದ ಪ್ರತಿನಿಧಿಗಳನ್ನು ಪ್ರಾಧಿಕಾರಕ್ಕೆ ಏಕೆ ನೇಮಕ ಮಾಡಿಲ್ಲ ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದರು.