ಶ್ರೀನಗರ, ಜೂ.24-ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಕಣಿವೆ ರಾಜ್ಯ ಕಾಶ್ಮೀರಕ್ಕೆ ಭೇಟಿ ನೀಡಿ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಹಾಗೂ ಒಳನಾಡು ಪ್ರದೇಶದಲ್ಲಿ ಭದ್ರತಾ ಸನ್ನಿವೇಶದ ಪರಾಮರ್ಶೆ ನಡೆಸಿದರು. ಎಲ್ಒಸಿ ಮತ್ತು ಕಣಿವೆ ರಾಜ್ಯದ ಒಳನಾಡು ಪ್ರದೇಶಗಳ ಬಳಿ ಪಾಕಿಸ್ತಾನಿ ಸೇನೆಯ ಕದನ ವಿರಾಮ ಉಲ್ಲಂಘನೆ ಮತ್ತು ಅಪ್ರಚೋದಿತ ಗುಂಡಿನ ದಾಳಿ ಹಾಗೂ ಉಗ್ರಗಾಮಿಗಳು ಒಳನುಸುಳುವಿಕೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥರ ಭೇಟಿ ಮತ್ತು ಪರಾಮರ್ಶೆ ಮಹತ್ವ ಪಡೆದುಕೊಂಡಿದೆ.
ಜನರಲ್ ಬಿಪಿನ್ ರಾವತ್ ಅವರೊಂದಿಗೆ ಉತ್ತರ ವಿಭಾಗದ ಸೇನಾ ಕಮ್ಯಾಂಡರ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಹಾಗೂ ಚಿನಾರ್ ಕಾಪ್ರ್ಸ್ ಕಮ್ಯಾಂಡರ್ ಲೆಫ್ಟಿನೆಂಟ್ ಜನರಲ್ ಎ.ಕೆ.ಭಟ್ ಅವರೂ ಕೂಡ ಕುಪ್ವಾರ ಮತ್ತು ಬಾರಮುಲ್ಲಾ ಗಡಿ ಜಿಲ್ಲೆಗಳಲ್ಲಿನ ಎಲ್ಒಸಿ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿ ಪರಾಮರ್ಶೆ ನಡೆಸಿದರು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಈ ಭಾಗದಲ್ಲಿ ಯಾವುದೇ ಸನ್ನಿವೇಶ ಎದುರಿಸಲು ಸನ್ನದ್ದವಾಗಿರುವ ಬಿಎಸ್ಎಫ್ ಮತ್ತು ಇತರ ಸೇನಾಪಡೆಗಳ ಸಿದ್ದತೆಯನ್ನು ಖುದ್ದು ಪರಿಶೀಲಿಸಿ, ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
ಉಗ್ರರ ನಿಗ್ರಹ ಕಾರ್ಯಾಚರಣೆಗಳಲ್ಲಿ ಯಶಸ್ಸು ಸಾಧಿಸುತ್ತಿರುವುದಕ್ಕೆ ಸೇನಾ ಪಡೆಗಳ ದಿಟ್ಟತನವನ್ನು ಪ್ರಶಂಸಿಸಿದ ಅವರು, ವೈರಿ ಪಡೆಗಳ ದುಷ್ಟ ಕುತಂತ್ರವನ್ನು ಹತ್ತಿಕ್ಕಲು ಮತ್ತಷ್ಟು ಕಟ್ಟೆಚ್ಚರದಿಂದ ಕಾರ್ಯಾಚರಣೆ ನಡೆಸುವಂತೆ ಹಾಗೂ ಗಡಿ ಭಾಗಗಳ ಭದ್ರತೆಯನ್ನು ಹೆಚ್ಚಿಸುವಂತೆ ಅವರು ಸಲಹೆ ಮಾಡಿದರು.
ನಂತರ ಅವರು ಶ್ರೀನಗರದ ರಾಜಭವನದಲ್ಲಿ ಕಾಶ್ಮೀರ ರಾಜ್ಯಪಾಲ ಎನ್.ಎನ್.ವೋಹ್ರಾ ಅವರನ್ನು ಭೇಟಿ ಮಾಡಿ ಕಾಶ್ಮೀರ ಭದ್ರತೆ ಕುರಿತು ಸಮಾಲೋಚನೆ ನಡೆಸಿದರು.