ವಾಟಾಳ್ ನಾಗರಾಜ್ ರಿಂದ ವಿಧಾನಸೌಧದ ಬಳಿ ವಿನೂತನ ಚಳವಳಿ

 

ಬೆಂಗಳೂರು, ಜೂ.23-ನಿರುದ್ಯೋಗ ಪದವೀಧರರಿಗೆ ಐದು ಸಾವಿರ ರೂ. ನಿರುದ್ಯೋಗ ಭತ್ಯೆ , ಹೈದರಾಬಾದ್-ಕರ್ನಾಟಕ ಭಾಗದವರಿಗೆ ಉಪಮುಖ್ಯಮಂತ್ರಿ ಸ್ಥಾನ, 371(ಜೆ) ವಿಧಿ ಸಮಗ್ರ ಅನುಷ್ಠಾನ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿಧಾನಸೌಧದ ಬಳಿ ವಿನೂತನ ಚಳವಳಿ ನಡೆಸಿದರು.

ಹೈದರಾಬಾದ್ ಕರ್ನಾಟಕವನ್ನು ಎಲ್ಲ ಸರ್ಕಾರಗಳು ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತಾ ಬಂದಿವೆ. ಏಕೀಕರಣವಾದ ಮೇಲೂ ಈ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರಗಳು ಪಕ್ಷಾತೀತವಾಗಿ ಶ್ರಮಿಸಬೇಕಾದ ಅಗತ್ಯವಿದೆ. ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು, ಜನಪ್ರತಿನಿಧಿಗಳು ಹಗಲಿರುಳು ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಹೈದರಾಬಾದ್-ಕರ್ನಾಟಕ ಭಾಗದವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕು, ಮತ್ತೊಂದು ಉಪಮುಖ್ಯಮಂತ್ರಿ ಸ್ಥಾನವನ್ನು ಈ ಭಾಗದವರಿಗೆ ನೀಡುವ ಮೂಲಕ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕೆಂದು ವಾಟಾಳ್ ಒತ್ತಾಯಿಸಿದರು.
ಹಂಪಿ ವಿಶ್ವವಿದ್ಯಾನಿಲಯ, ಕೃಷ್ಣದೇವರಾಯವಿಶ್ವವಿದ್ಯಾನಿಲಯ, ಅಕ್ಕಮಹಾದೇವಿ ಮಹಿಳಾ ವಿವಿ ಸೇರಿದಂತೆ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಅವರು ಹೇಳಿದರು.
ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಬಜೆಟ್‍ನಲ್ಲಿ ಹೆಚ್ಚು ಅನುದಾನ ಒದಗಿಸಬೇಕು, ಇಲ್ಲದಿದ್ದರೆ ನಾವು ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ