ಚನ್ನಪಟ್ಟಣ, ಜೂ.23- ತಾಲೂಕಿನಲ್ಲಿ ಖ್ಯಾತ ಮಕ್ಕಳ ತಜ್ಞರೆಂದು ಖ್ಯಾತಿ ಹೊಂದಿರುವ ವೈದ್ಯರ ಮನೆಗೆ ನುಗ್ಗಿದ ದರೋಡೆಕೋರರ ತಂಡ ವೈದ್ಯರ ಮೇಲೆ ಹಲ್ಲೆ ನಡೆಸಿ ಒಂದೂವರೆ ಲಕ್ಷ ನಗದು ಮತ್ತು ಎಟಿಎಂ ಕಾರ್ಡ್ ದೋಚಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಖ್ಯಾತ ಮಕ್ಕಳ ತಜ್ಞ ರಾಜಣ್ಣ ಅವರ ಮೇಲೆ ಹಲ್ಲೆ ನಡೆಸಿ ದರೋಡೆಕೋರರು ಹಣ ದೋಚಿ ಪರಾರಿಯಾಗಿದ್ದಾರೆ. ಪಟ್ಟಣದ ಕುವೆಂಪುನಗರ ಬಡಾವಣೆ, 7ನೆ ಕ್ರಾಸ್ನಲ್ಲಿ ಡಾ.ರಾಜಣ್ಣ ಅವರು ಮನೆ ಮಾಡಿಕೊಂಡು ಅಲ್ಲೇ ಕ್ಲಿನಿಕ್ ನಡೆಸುತ್ತಾರೆ.
ಇವರ ಕುಟುಂಬ ಮೈಸೂರಿನಲ್ಲಿದ್ದು, ವಾರಕ್ಕೊಮ್ಮೆ ಊರಿಗೆ ಹೋಗಿ ಬರುತ್ತಾರೆ. ನಿನ್ನೆ ರಾತ್ರಿ 10.30ರ ಸಮಯದಲ್ಲಿ ಆರು ಮಂದಿ ಮುಖಕ್ಕೆ ಮುಸುಕು ಹಾಕಿಕೊಂಡು ಬಂದು ಆರೋಗ್ಯ ತಪಾಸಣೆ ಮಾಡಿಸಬೇಕೆಂದು ಕೇಳಿದ್ದಾರೆ. ನಿಜವೆಂದು ನಂಬಿದ ರಾಜಣ್ಣ ತಪಾಸಣೆಗೆ ಮುಂದಾದಾಗ ಏಕಾಏಕಿ ಅವರ ಮೇಲೆ ಲಾಂಗ್ನಿಂದ ದರೋಡೆಕೋರರು ಹಲ್ಲೆ ನಡೆಸಿ ಅವರ ಕೈ ಕಟ್ಟಿ ಹಾಕಿ ಮನೆಯಲ್ಲಿ ಯಾವ ಯಾವ ಕಬೋರ್ಡ್ನಲ್ಲಿ ಏನೇನು ಇಟ್ಟಿದ್ದೀಯ, ಒಡವೆ ಎಲ್ಲಿದೆ, ಹಣ ಎಷ್ಟು ಇಟ್ಟಿದ್ದೀಯ ತೋರಿಸು ಎಂದು ಧಮ್ಕಿ ಹಾಕಿದ್ದಾರೆ. ವೈದ್ಯರನ್ನು ಮನೆಯ ಎಲ್ಲ ಕೊಠಡಿಗೂ ಕರೆದೊಯ್ದು ಕಬೋರ್ಡ್ಗಳನ್ನು ದರೋಡೆಕೋರರು ಜಾಲಾಡಿದ್ದಾರೆ. ಆದರೆ, ಅವರಿಗೆ ಅಲ್ಲಿ ಏನೂ ಸಿಕ್ಕಿಲ್ಲ. ನಂತರ ಕ್ಯಾಷ್ ಕೌಂಟರ್ ತೆಗೆದು ಹಣ ಎಷ್ಟಿದೆ ಕೊಡು ಎಂದು ಒತ್ತಾಯಿಸಿದ್ದಾರೆ.
ಕೈ ಕಟ್ಟಿಹಾಕಿದ್ದರಿಂದ ದರೋಡೆಕೋರರೇ ಕೌಂಟರ್ ತೆಗೆದು ಅದರಲ್ಲಿದ್ದ ಒಂದೂವರೆ ಲಕ್ಷ ಹಣ ತೆಗೆದುಕೊಂಡು ನಂತರ ಎಟಿಎಂ ಕಾರ್ಡ್ ಕೊಡುವಂತೆ ಕೇಳಿದ್ದಾರೆ. ಎಟಿಎಂ ಕಾರ್ಡ್ ಕೊಟ್ಟ ನಂತರ ಪಿನ್ಕೋಡ್ ನಂಬರ್ ಕೇಳಿ ಬಲವಂತವಾಗಿ ಬರೆಸಿಕೊಂಡು ಮತ್ತೆ ಧಮ್ಕಿ ಹಾಕಿ ಓಡಿಹೋಗಿದ್ದಾರೆ. ಹಲ್ಲೆಯಿಂದ ಗಾಯಾಳುವಾಗಿರುವ ಡಾ.ರಾಜಣ್ಣ ಅವರು ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ. ಅವರು ಪಟ್ಟಣದ ಪುಣ್ಯ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಪಟ್ಟಣ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಸತೀಶ್ ಮತ್ತು ಸಿಬ್ಬಂದಿ, ಬೆರಳಚ್ಚು ತಜ್ಞರು, ಶ್ವಾನದಳದೊಂದಿಗೆ ತಪಾಸಣೆ ನಡೆಸಿದರು.
ವೈದ್ಯರ ಮನೆ ಸಿಸಿಟಿವಿ ಹಾಗೂ ರಸ್ತೆಯಲ್ಲಿ ಹಾಕಿರುವ ಸಿಸಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪೆÇಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಅಕ್ಕಪಕ್ಕದ ಮನೆಯವರು ಮತ್ತು ಸಮೀಪದಲ್ಲಿದ್ದ ಅಂಗಡಿಯವರನ್ನು ದರೋಡೆಕೋರರ ಬಗ್ಗೆ ವಿಚಾರಿಸಿದಾಗ ಮುಸುಕು ಹಾಕಿದ ಆರು ಮಂದಿ ಬಂದು ಸಿಗರೇಟ್ ಕೊಂಡರೆಂದು ಅಂಗಡಿ ಮಾಲೀಕರು ಪೆÇಲೀಸರಿಗೆ ತಿಳಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಡಾ.ರಾಜಣ್ಣ ಅವರು ಸಿನಿಮಾಗಳಲ್ಲಿ ದರೋಡೆ ನಡೆಯುತ್ತಿದ್ದುದನ್ನು ನೋಡಿ ಬೆರಗಾಗುತ್ತಿದ್ದೆ. ಆದರೆ, ಇದು ನನಗೇ ಅನುಭವವಾಗಿ ಬೆಚ್ಚಿಬಿದ್ದಿದ್ದೇನೆ. ಅದನ್ನು ಊಹಿಸಿಕೊಳ್ಳಲೂ ನನ್ನಿಂದ ಆಗುತ್ತಿಲ್ಲ ಎಂದು ಹೇಳಿದರು. ನಮ್ಮದೇ ರಸ್ತೆಯಲ್ಲಿ ಎರಡು-ಮೂರು ತಿಂಗಳ ಹಿಂದೆ ಹಾಡಹಗಲಲ್ಲೇ ದರೋಡೆ ನಡೆದಿತ್ತು. ಆದರೂ ಪೆÇಲೀಸರು ಎಚ್ಚೆತ್ತುಕೊಂಡಿಲ್ಲ. ಇನ್ನಾದರೂ ಕಳ್ಳತನ, ದರೋಡೆ ಮತ್ತಿತರ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಬೇಕೆಂದು ರಾಜಣ್ಣ ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.