ಮೈಸೂರು,ಜೂ.23- ಆಷಾಡ ಶುಕ್ರವಾರಗಳಲ್ಲಿ ಚಾಮುಂಡಿ ಬೆಟ್ಟದಲ್ಲಿ ಭಕ್ತಾಧಿಗಳಿಗೆ ಪೂಜಾ ಸೌಲಭ್ಯಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.
ಚಾಮುಂಡಿ ಬೆಟ್ಟದಲ್ಲಿ ಸಂಜೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಆಷಾಡ ಶುಕ್ರವಾರದ ವ್ಯವಸ್ಥೆಗಳ ಬಗ್ಗೆ ಸೂಚನೆ ನೀಡಿದರು.
ಜುಲೈ 20ರಂದು ಮೊದಲ ಆಷಾಡ ಶುಕ್ರವಾರ 27ರಂದು ಎರಡನೇ ಶುಕ್ರವಾರ, ಆಗಸ್ಟ್ 3ರಂದು 3ನೇ ಶುಕ್ರವಾರ ಆಗಸ್ಟ್ 10ರಂದು ಕಡೇ ಆಷಾಡ ಶುಕ್ರವಾರ. ಈ ಅವಧಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಭಕ್ತಾಧಿಗಳು ದೇಗುಲಕ್ಕೆ ಬರುವ ಸಾದ್ಯತೆಯಿದ್ದು ಎಲ್ಲ ರೀತಿಯ ಸೌಕರ್ಯ ಕಲ್ಪಿಸುವ ಅವಶ್ಯಕತೆ ಇದೆ. ಆಷಾಡ ಶುಕ್ರವಾರಗಳಂದು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕ ವಾಹನಗಳ ಸಂಚಾರ ನಿಷೇಧಿಸಲಾಗುತ್ತದೆ. ಮೈಸೂರಿನ ಲಲಿತ ಮಹಲ್ ಹೆಲಿಪ್ಯಾಡ್, ಕೆಎಸ್ ಆರ್ಟಿಸಿ ಬಸ್ ಮೂಲಕ ಉಚಿತ ಪ್ರಯಾಣದ ವ್ಯವಸ್ಥೆ ಕ್ರಮ ಕೈಗೊಳ್ಳಲು ಆದೇಶಿಸಿದರು. ಲಲಿತ ಮಹಲ್ ಹೆಲಿಪ್ಯಾಡ್ನಲ್ಲಿ ಸಾರ್ವಜನಿಕ ವಾಹನಗಳ ನಿಲುಗಡೆ ಹಾಗೂ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೆÇಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಚಾಮುಂಡಿ ಬೆಟ್ಟದಲ್ಲಿ ಸೂಕ್ತ ಭದ್ರತೆಗೆ ಪ್ಯಾರಾ ಮೆಡಿಕಲ್ ತಂಡ, ಆ್ಯಂಬುಲೆನ್ಸ್ , ಕುಡಿಯುವ ನೀರು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಒದಗಿಸುವಂತೆಯೂ ತಿಳಿಸಿದರು.
ಮೆಟ್ಟಿಲು ಮೂಲಕ ಬೆಟ್ಟಕ್ಕೆ ತೆರಳುವವರಿಗೂ ಸಹ ಅಗತ್ಯಸೌಲಭ್ಯಗಳನ್ನು ಕೈಗೊಳ್ಳಬೇಕು, ಸ್ವಚ್ಛತೆ ಹಾಗೂ ಶೌಚಾಲಯ ವ್ಯವಸ್ಥೆಗೆ ಒತ್ತು ನೀಡುವಂತೆ ಹೇಳಿದರು. ಈ ಬಾರಿ ಎರಡನೇ ಆಷಾಡ ಶುಕ್ರವಾರದ ದಿನವಾದ ಜುಲೈ 27ರಂದು ಚಂದ್ರಗ್ರಹಣ ಇರುವ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆಯಿಂದ ದೇವಿಗೆ ವಿಶೇಷ ಪೂಜೆ, ಅಭಿಷೇಕ ನಡೆಯಲಿದೆ. ಹಾಗಾಗಿ ರಾತ್ರಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಭಕ್ತರು ವಿತರಿಸುವ ಪ್ರಸಾದವನ್ನು ಪರೀಕ್ಷಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ದಾಸೋಹ ಭವನದಲ್ಲಿ ಊಟಕ್ಕೆ ಎಲ್ಲ ರೀತಿಯ ಸಿದ್ಧತೆಯೊಂದಿಗೆ ಬೆಟ್ಟಕ್ಕೆ ಬರುವ ಪ್ರತಿಯೊಬ್ಬರಿಗೂ ಪ್ರಸಾದ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು.
ಈಗಿರುವ ಸಿಸಿ ಕ್ಯಾಮೆರಾಗಳ ಜೊತೆಗೆ ಮತ್ತಷ್ಟು ಸಿಸಿ ಕ್ಯಾಮೆರಾ ಅಳವಡಿಸಿ, ಮೊಬೈಲ್, ಚಿನ್ನಾಬರಣ ಕಳವು ನಡೆಯದಂತೆ ನೋಡಿಕೊಳ್ಳಬೇಕೆಂದು ಹೇಳಿದರು. 3ನೇ ಆಷಾಡ ಶುಕ್ರವಾರದಂದು ಚಾಮುಂಡೇಶ್ವರಿ ವರ್ಧಂತಿಯೂ ಇರುವುದರಿಂದ ಅಂದು ಮತ್ತಷ್ಟು ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಚಾಮುಂಡೇಶ್ವರಿ ದೇವಾಲಯ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್, ಮುಜರಾಯಿ ತಹಸೀಲ್ದಾರ್ ಯತಿರಾಜು, ಸಂಪತ್ಕುಮಾರ್, ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.