ಹವಾನ, ಜೂ.23-ಭಾರತ ಮತ್ತು ಕ್ಯೂಬಾ ನಡುವೆ ಜೈವಿಕ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ಹಾಗೂ ಸಂಪ್ರದಾಯಿಕ ಔಷಧಿ ಕ್ಷೇತ್ರದಲ್ಲಿ ಸಹಕಾರ ವೃದ್ದಿಗೆ ಸಹಮತ ವ್ಯಕ್ತವಾಗಿದೆ.
ದ್ವೀಪರಾಷ್ಟ್ರದ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕ್ಯೂಬಾ ಅಧ್ಯಕ್ಷ ಮಿಗ್ಯೂಲ್ ಡಿಯಾಜ್ ಕ್ಯಾನೆಲ್ ಅವರೊಂದಿಗೆ ಸದೃಢ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಗೊಳಿಸುವ ಕುರಿತು ವ್ಯಾಪಕ ಚರ್ಚೆ ನಡೆಸಿದರು. ಗ್ರೀಸ್ ಮತ್ತು ಸುರಿನಾಮ್ ಪ್ರವಾಸದ ನಂತರ ಮೂರು ರಾಷ್ಟ್ರಗಳ ಭೇಟಿಯ ಕೊನೆ ಹಂತವಾಗಿ ಗುರುವಾರ ಕ್ಯೂಬಾ ರಾಜಧಾನಿ ಹವಾನಗೆ ಆಗಮಿಸಿದ ಕೋವಿಂದ್ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ತಮ್ಮ ಅಧಿಕೃತ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಅವರು ಕ್ಯೂಬಾ ಅಧ್ಯಕ್ಷರನ್ನು ಭೇಟಿ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಂಬಂಧ ಬಲವರ್ಧನೆ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು. ಈ ಮಾತುಕತೆ ಬಳಿಕ ಎರಡೂ ದೇಶಗಳ ನಡುವೆ ಬಾಂಧವ್ಯ ವೃದ್ಧಿಗಾಗಿ ಒಮ್ಮತದ ನಿಲುವು ವ್ಯಕ್ತವಾಗಿದೆ.