ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರ್‍ಎಸ್‍ಎಸ್ ನಾಯಕನ ದೂರು

 

ಬೆಂಗಳೂರು,ಜೂ.23- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರ್‍ಎಸ್‍ಎಸ್ ಮುಖಂಡರೊಬ್ಬರು ಬಿಜೆಪಿ ಹೈಕಮಾಂಡ್‍ಗೆ ದೂರು ನೀಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಹಾಗೂ ಆರ್‍ಎಸ್‍ಎಸ್‍ನ ಕೆಲ ಮುಖಂಡರ ನಡುವೆ ಕೆಲ ಭಿನ್ನಮತ ಜೋರಾಗಿದೆ. ಯಡಿಯೂರಪ್ಪ ಏಕಪಕ್ಷೀಯ ನಡೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿರುವ ಆರ್‍ಎಸ್‍ಎಸ್ ಮುಖಂಡ ಮುಕುಂದ್, ಬಿಜೆಪಿಯ ದೆಹಲಿ ವರಿಷ್ಠರಿಗೆ ಮೌಖಿಕ ದೂರು ನೀಡಿದ್ದಾರೆ ಎಂಬ ಮಾಹಿತಿ ಬಿಜೆಪಿ ಆಪ್ತ ಮೂಲಗಳಿಂದ ಲಭ್ಯವಾಗಿದೆ.
ಆರ್‍ಎಸ್‍ಎಸ್ ಹಿರಿಯ ಮುಖಂಡ ಮುಕುಂದ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್‍ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ವಿಧಾನಪರಿಷತ್ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಎಸ್‍ವೈ ಏಕಪಕ್ಷೀಯ ನಡೆ ಅನುಸರಿಸಿದ್ದಾರೆ. ಆರ್‍ಎಸ್‍ಎಸ್ ನಾಯಕರ ಸಲಹೆಗಳನ್ನು ಯಡಿಯೂರಪ್ಪ ಪರಿಗಣಿಸಿಲ್ಲ. ನಿನ್ನೆ ಮೊನ್ನೆ ಬಂದ ಕೆ.ಪಿ.ನಂಜುಂಡಿಗೆ ಪಕ್ಷದಲ್ಲಿ ಜವಾಬ್ದಾರಿ ಕೊಡಬಹುದಿತ್ತು. ಆದರೆ ಪರಿಷತ್ ಸ್ಥಾನ ಕೊಟ್ಟಿದ್ದಾರೆ. ಅಲ್ಲದೆ ಬ್ರಾಹ್ಮಣ ಸಮುದಾಯವನ್ನು ಯಡಿಯೂರಪ್ಪ ಪರಿಣಿಸಿಲ್ಲ ಎಂದು ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅರುಣ್ ಶಹಾಪುರ್‍ಗೆ ಆರ್‍ಎಸ್‍ಎಸ್ ಬೆಂಬಲ:
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ನೇಮಕ ಸಂಬಂಧ ಉತ್ತರ ಕರ್ನಾಟಕದ ಪರ ಆರ್‍ಎಸ್‍ಎಸ್ ಬ್ಯಾಟಿಂಗ್ ಮಾಡಿದೆ. ವಾಯುವ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ್‍ಗೆ ಪರಿಷತ್ ವಿಪಕ್ಷ ನಾಯಕ ಸ್ಥಾನ ಹಾಗೂ ರಘುನಾಥ್ ರಾವ್ ಮಲ್ಕಾಪುರೆ ಅವ್ರನ್ನ ಉಪನಾಯಕ ಸ್ಥಾನಕ್ಕೆ ನೇಮಕ ಮಾಡುವಂತೆ ಬಿಜೆಪಿಗೆ ಆರ್‍ಎಸ್‍ಎಸ್ ಸಲಹೆ ಕೊಟ್ಟಿದೆ.
ನಿನ್ನೆ ಬೆಂಗಳೂರಿನ ಆರ್‍ಎಸ್‍ಎಸ್ ಕಚೇರಿ ಕೇಶವ ಕೃಪಾದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ನಾಯಕರಿಗೆ ಸಂಘ ಈ ಅಭಿಪ್ರಾಯ ತಿಳಿಸಿದೆ.
ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಮತ್ತು ವಿಪಕ್ಷ ಮುಖ್ಯ ಸಚೇತಕ ಎರಡು ಸ್ಥಾನ ದಕ್ಷಿಣ ಕರ್ನಾಟಕಕ್ಕೆ ನೀಡಲಾಗಿದೆ. ಹೀಗಾಗಿ ಪರಿಷತ್‍ನಲ್ಲಿ ಪ್ರತಿಪಕ್ಷ ನಾಯಕ ಮತ್ತು ಉಪನಾಯಕ ಸ್ಥಾನಗಳನ್ನು ಉತ್ತರ ಕರ್ನಾಟಕಕ್ಕೆ ನೀಡುವಂತೆ ಸೂಚನೆ ಕೊಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ