
ಬೆಂಗಳೂರು, ಜೂ.22- ಸರ್ಕಾರಿ ಕಾರ್ಯಕ್ರಮ, ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಹೆಸರಿನಲ್ಲಿ ನಡೆಯಲಿರುವ ದುಂದುವೆಚ್ಚಕ್ಕೂ ಕಡಿವಾಣಹಾಕಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.
ಸರ್ಕಾರದ ಕಾರ್ಯಕ್ರಮಗಳನ್ನು ಉದ್ಘಾಟಿಸುವಾಗ ಇಲ್ಲವೇ ಶಂಕುಸ್ಥಾಪನೆ ನೆರವೇರಿಸುವಂತಹ ಸಂದರ್ಭಗಳಲ್ಲಿ ಅದ್ಧೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದುಂದುವೆಚ್ಚ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವುದನ್ನು ತಪ್ಪಿಸಲು ಮುಖ್ಯಮಂತ್ರಿ ಉದ್ದೇಶಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಾರ್ಯಕ್ರಮಗಳ ಹೆಸರಿನಲ್ಲಿ ಅನಗತ್ಯವಾಗಿ ಮಾಡುವ ವೆಚ್ಚಗಳನ್ನು ಕಡಿಮೆ ಮಾಡಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸಬೇಕೆಂಬ ಉದ್ದೇಶವಿದೆ. ರೈತರ ಸಾಲ ಮನ್ನಾ ಹಾಗೂ ಜನಪರ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣ ವ್ಯಯಿಸಬೇಕು. ಕಾರ್ಯಕ್ರಮಗಳಿಗೆ ಹೆಚ್ಚು ಹಣ ವ್ಯಯಿಸುವುದನ್ನು ನಿಲ್ಲಿಸಬೇಕು. ಈ ಸಂಬಂಧ ಸದ್ಯದಲ್ಲೇ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಹಲವು ಇಲಾಖೆಗಳಲ್ಲಿ ಕೆಲವು ಸಂದರ್ಭಗಳಲ್ಲಿ ಯೋಜನೆಗಿಂತ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣ ವ್ಯಯವಾಗಿರುವುದನ್ನು ಗಮನಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಶಂಕುಸ್ಥಾಪನೆ, ಉದ್ಘಾಟನೆಯಂತಹ ಸರ್ಕಾರಿ ಕಾರ್ಯಕ್ರಮಗಳಿಗೂ ಕಡಿವಾಣ ಬೀಳುವ ಸಾಧ್ಯತೆ ಇದೆ.
ಹಲವು ಇಲಾಖೆಗಳಲ್ಲಿ ಜನಪರವಲ್ಲದ ಯೋಜನೆಗಳಿಗೆ ಹೆಚ್ಚಿನ ಹಣ ಖರ್ಚು ಮಾಡುತ್ತಿದ್ದು, ಆ ಹಣವನ್ನು ಸಾಲ ಮನ್ನಾ ಯೋಜನೆಗೆ ಬಳಸುವ ಸಾಧ್ಯತೆಗಳು ಹೆಚ್ಚಾಗಿವೆ.
ಈಗಾಗಲೇ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಚಿವರ ಹಾಗೂ ಅಧಿಕಾರಿಗಳ ಹೊಸ ಕಾರುಗಳ ಖರೀದಿಗೂ ಕಡಿವಾಣ ಹಾಕಿದ್ದಾರೆ. ಜತೆಗೆ ನೂತನ ಸಚಿವರ ನಿವಾಸಗಳ ನವೀಕರಣಕ್ಕೂ ಅನುಮತಿ ನೀಡಿಲ್ಲ. ಇದೇ ರೀತಿ ಸರ್ಕಾರದ ವಿವಿಧ ಹಂತಗಳಲ್ಲಿ ನಡೆಯುವಂತಹ ದುಂದುವೆಚ್ಚಗಳಿಗೆ ಹಂತ ಹಂತವಾಗಿ ಕಡಿವಾಣ ಹಾಕಿ ರಾಜ್ಯದ ಆರ್ಥಿಕ ಸಂಪನ್ಮೂಲವನ್ನು ಕ್ರೂಢೀಕರಿಸಿ ಜನಪರ ಕಾರ್ಯಕ್ರಮಗಳಿಗೆ ಬಳಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.