ಹಳ್ಳಿವರೆಗೂ ಉನ್ನತ ಶಿಕ್ಷಣ ಕೊಂಡೊಯ್ಯಬೇಕೆಂಬ ಉದ್ದೇಶ ನಮ್ಮದು: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ

 

ಬೆಂಗಳೂರು, ಜೂ.22- ಹಳ್ಳಿವರೆಗೂ ಉನ್ನತ ಶಿಕ್ಷಣ ಕೊಂಡೊಯ್ಯಬೇಕೆಂಬ ಉದ್ದೇಶ ಹೊಂದಿರುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಕಚೇರಿ ಪೂಜೆ ಮಾಡಿ ಕಾರ್ಯಾರಂಭ ಮಾಡಿದ ಸಚಿವರು, ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಉನ್ನತ ಶಿಕ್ಷಣದಲ್ಲಿ ಬದಲಾವಣೆ ತರಲಾಗುವುದು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದಾಗಿ ಹೇಳಿದರು.

ಉನ್ನತ ಶಿಕ್ಷಣ ದೊಡ್ಡ ಖಾತೆಯಾಗಿದ್ದು, ಅದರ ಬಗ್ಗೆ ಹಗುರವಾಗಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪೆÇ್ರ.ರಂಗಪ್ಪ ಸೇರಿದಂತೆ ಶಿಕ್ಷಣ ತಜ್ಞರ ಸಭೆ ಕರೆದು ಅವರ ಸಲಹೆ ಪಡೆದು ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲಾಗುವುದು ಎಂದು ಹೇಳಿದರು.
ಉನ್ನತ ಶಿಕ್ಷಣ ಪಡೆಯುವವರ ಶೇಕಡಾವಾರು ಪ್ರಮಾಣ ಹೆಚ್ಚಳಕ್ಕೆ ಪ್ರಯತ್ನಿಸಲಾಗುವುದು. ಪ್ರಸ್ತುತ ಶೇ.25ರಷ್ಟು ಮಂದಿ ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ವೃತ್ತಿ ಶಿಕ್ಷಣವನ್ನು ಕೂಡ ನೀಡಲಾಗುತ್ತಿದ್ದು, ಉನ್ನತ ಶಿಕ್ಷಣ ಕಾಯ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗುವುದು ಎಂದರು.

ಗ್ರಾಮೀಣ ಪ್ರದೇಶದ ಜನರ ಜತೆ ಇರಬೇಕೆಂಬ ಆಸೆ ಇತ್ತು. ತಾವು 8ನೆ ತರಗತಿ ಓದಿದ್ದು, ಹೇಗೆ ಉನ್ನತ ಶಿಕ್ಷಣ ನಿಭಾಯಿಸುತ್ತಾರೆ ಎಂಬ ಟೀಕೆ ಕೇಳಿಬಂದವು. ಅಲ್ಲದೆ, ತಮ್ಮ ತಂದೆ ನಿಧನರಾದ ಕಾರಣದಿಂದ ಹೆಚ್ಚಿನ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ತಮ್ಮ ಮಕ್ಕಳು ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂದರು.

ರಂಗಪ್ಪ ಅವರನ್ನು ಉನ್ನತ ಶಿಕ್ಷಣ ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಸಲಹೆ ಮಾಡಿಲ್ಲ. ರಂಗಪ್ಪ ಅವರು ಕೂಡ ನಮ್ಮ ಸಭೆಗಳನ್ನು ತೆಗೆದುಕೊಳ್ಳಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಕಂದಾಯ, ನೀರಾವರಿ ಖಾತೆಗಳನ್ನು ಕೇಳಿದ್ದೆವು. ಆದರೆ, ಆ ಖಾತೆಗಳು ಕಾಂಗ್ರೆಸ್ ಪಕ್ಷದ ಪಾಲಾಗಿವೆ. ಬೇರೆ ಖಾತೆಯನ್ನು ಕೂಡ ಬಯಸುವುದಿಲ್ಲ ಎಂದರು.
ಖಾತೆ ಬದಲಾವಣೆ ಮಾಡುವಂತೆ ಕಳೆದ ಎರಡು ವಾರಗಳಿಂದ ತಟಸ್ಥವಾಗಿದ್ದ ದೇವೇಗೌಡರು ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಕಚೇರಿ ಪೂಜೆ ಮಾಡುವ ಮೂಲಕ ಸಚಿವರಾಗಿ ಕಾರ್ಯಾರಂಭ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ