ಬೆಂಗಳೂರು, ಜೂ.21-ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ಶೀತಲ ಸಮರ ಇಲ್ಲ, ಮಾಧ್ಯಮಗಳು ಕಪೆÇೀಲಕಲ್ಪಿತವಾಗಿ ವರದಿ ಮಾಡುತ್ತಿವೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಯಾರೊಂದಿಗೂ ವೈಯಕ್ತಿಕ ದ್ವೇಷ ಒಳ್ಳೆಯದಲ್ಲ. ನಾನು ಅದನ್ನು ಅನುಸರಿಸುವುದೂ ಇಲ್ಲ. ಡಿ.ಕೆ.ಶಿವಕುಮಾರ್ ಮತ್ತು ನಾನು ಚೆನ್ನಾಗಿದ್ದೇವೆ. ಊಹೆ ಮಾಡಿಕೊಂಡು ನೀವೇ ಏನೇನೋ ಬರೆದುಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ. ದುಡ್ಡು ಕೊಟ್ಟು ಪ್ರಚಾರ ಪಡೆಯಬೇಕು, ಆದರೆ ಶೀತಲ ಸಮರದ ಹೆಸರಿನಲ್ಲಿ ಉಚಿತವಾಗಿ ಪ್ರಚಾರ ನೀಡುವಾಗ ನಾನೇಕೆ ಬೇಡ ಎನ್ನಲಿ ಎಂದು ವ್ಯಂಗ್ಯವಾಡಿದರು.
ಡಿ.ಕೆ.ಶಿವಕುಮಾರ್ ಮೇಲೆ ಐಟಿ ದಾಳಿ ಬಗ್ಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯದಲ್ಲಿ ವೈಯಕ್ತಿಕವಾಗಿ ಯಾರ ಮೇಲೂ ದ್ವೇಷ ಸಾಧಿಸಬಾರದು, ಅದು ಒಳ್ಳೆಯದಲ್ಲ ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಮಾಡುವುದು ಪ್ರಥಮ ಆದ್ಯತೆ. ಈ ಹಿಂದೆ ಚುನಾವಣೆ ಪೂರ್ವದಲ್ಲಿ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಅದನ್ನು ಜಾರಿಗೆ ತರುವುದು ನಮ್ಮ ಆದ್ಯತೆ. ಕಳೆದ ಮೂರು ವರ್ಷಗಳಿಂದ ಬರದಿಂದಾಗಿ ರೈತರು ತತ್ತರಿಸಿದ್ದಾರೆ. ಅವರ ನೆರವಿಗೆ ನಿಲ್ಲಬೇಕಿರುವುದು ಸರ್ಕಾರದ ಕರ್ತವ್ಯ. ಅದಕ್ಕೆ ನನ್ನ ಬದ್ಧತೆ ಇದೆ ಎಂದು ಹೇಳಿದರು.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಸಾಲ ಮನ್ನಾ ಮಾಡಿತ್ತು. ಆದರೆ ಅದರಲ್ಲಿ ಪೂರ್ಣವಾಗಿ ಹಣ ಮರುಪಾವತಿಯಾಗಿಲ್ಲ. ಸಹಕಾರ ಸಂಘಗಳಲ್ಲಿ ರೈತರ ಕೃಷಿ ಸಾಲ 11 ಸಾವಿರ ಕೋಟಿಯಷ್ಟಿದೆ. ಷೇರಿನ ಪಾಲು ಶೇ.10ರಷ್ಟು ತೆಗೆದರೆ 1 ಸಾವಿರ ಕೋಟಿ ಬಿಟ್ಟು, 10 ಸಾವಿರ ಕೋಟಿ ರೂ. ಸಾಲ ಉಳಿಯಲಿದೆ. ಅದನ್ನು ಸಂಪೂರ್ಣ ಮನ್ನಾ ಮಾಡಬೇಕು, ನಂತರ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲದ ಬಗ್ಗೆ ಚರ್ಚೆಯಾಗಬೇಕು. ಹಾಗೆಯೇ ಗರ್ಭಿಣಿಯರಿಗೆ ಮತ್ತು ವೃದ್ಧರಿಗೆ ಮಾಸಿಕ 6000 ರೂ. ಮಾಸಾಶನ ನೀಡುವುದು ಜೆಡಿಎಸ್‍ನ ಪ್ರಣಾಳಿಕೆಯ ಪ್ರಮುಖ ಅಂಶ. ವಯಸ್ಸಾದ ತಂದೆ-ತಾಯಿಯನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳದೆ ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದಾರೆ. ಅಂತಹ ವೃದ್ಧ ದಂಪತಿಗೆ ತಲಾ 6 ಸಾವಿರದಂತೆ ಇಬ್ಬರಿಗೆ 12 ಸಾವಿರ ರೂ. ಮಾಸಾಶನ ನೀಡಿದರೆ ಹೇಗೋ ಜೀವನ ನಡೆಸುತ್ತಾರೆ. ಈ ಎಲ್ಲಾ ಅಂಶಗಳು ನಿನ್ನೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಭೆಯಲ್ಲಿ ಚರ್ಚೆಯಾಗಿದೆ. ಒಮ್ಮತದ ನಿರ್ಣಯಗಳಾಗಿವೆ. ಯಾವುದೇ ಭಿನ್ನಮತ ಇಲ್ಲ ಎಂದು ರೇವಣ್ಣ ಸ್ಪಷ್ಟಪಡಿಸಿದರು.