ಯುವ ಕಾಂಗ್ರೆಸ್ ಮುಖಂಡರ ಪ್ರತಿಭಟನೆ

 

ಬೆಂಗಳೂರು, ಜೂ.21- ಐಟಿ, ಇಡಿ ಸಂಸ್ಥೆಗಳ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಿ ಕೇಂದ್ರ ಸರ್ಕಾರ ಬೆದರಿಸುವ ತಂತ್ರ ಮಾಡುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಮುಖಂಡರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ದುರುದ್ದೇಶಪೂರ್ವಕವಾಗಿ ನಿರಂತರ ಐಟಿ ದಾಳಿ ನಡೆಸಿ ಮಾನಸಿಕ ಕಿರುಕುಳ ನೀಡುವ ಮೂಲಕ ಅವರ ರಾಜಕೀಯ ವರ್ಚಸ್ಸಿಗೆ ಕುಂದು ತರುತ್ತಿದೆ. ಈ ಕ್ರಮ ಖಂಡನೀಯ ಎಂದು ಪ್ರತಿಭಟನಾ ನಿರತ ಕಾಂಗ್ರೆಸ್ ಮುಖಂಡರು ಆರೋಪಿಸಿದರು.
ಡಿ.ಕೆ.ಶಿವಕುಮಾರ್ ಅವರನ್ನು ಐಟಿ ಮತ್ತು ಇಡಿ ಮೂಲಕ ಕಟ್ಟಿಹಾಕುವ ಪ್ರಯತ್ನವನ್ನು ನಿರಂತರವಾಗಿ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಇದು ನಡೆಯುವುದಿಲ್ಲ ಎಂದು ಮುಖಂಡರಾದ ಜಿ.ಜನಾರ್ಧನ್, ಮನೋಹರ್ ಮೊದಲಾದವರು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ಅವರು ಬಿಜೆಪಿಯವರು ಮಾಡುವ ಕುತಂತ್ರವನ್ನು ಎದುರಿಸುವ ಪ್ರಬಲ ಶಕ್ತಿಯನ್ನು ಹೊಂದಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ತಲೆಬಾಗುವುದಾಗಿ ತಿಳಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿ ಎದುರಿಸುತ್ತಿರುವ ಬಿಜೆಪಿಯವರು ರಾಜ್ಯದ ಪ್ರಭಾವಿ ನಾಯಕರಾದ ಡಿ.ಕೆ.ಶಿವಕುಮಾರ್ ಅವರಿಗೆ ರಾಜಕೀಯ ಪ್ರೇರಿತವಾದ ನೋಟಿಸ್ ನೀಡಿ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ದೂರಿದರು.
ಬಿಜೆಪಿ ಹೈಕಮಾಂಡ್‍ಗೆ ಕಪ್ಪ ನೀಡಿರುವುದರ ಬಗ್ಗೆ ಬಿ.ಎಸ್.ಯಡಿಯೂರಪ್ಪ ಮತ್ತು ಅನಂತ್‍ಕುಮಾರ್ ಅವರು ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿರುವುದರ ಬಗ್ಗೆ ಮೊದಲು ತನಿಖೆ ಆಗಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಆನಂದ್, ರಾಮಕೃಷ್ಣ, ಶೇಖರ್, ಶಂಕರ್, ಬಾಬು, ಶಿವಕುಮಾರ್, ಮಹೇಶ್ವರಿ, ರಚನಾ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ