ನೇಕಾರರ ಸಂಕಷ್ಟಕ್ಕೂ ಮೈತ್ರಿ ಸರ್ಕಾರ ಮುಂದಾಗಬೇಕು: ನೇಕಾರರ ಜಾಗೃತಿ ವೇದಿಕೆ

Varta Mitra News

 

ಬೆಂಗಳೂರು, ಜೂ.21- ರಾಜ್ಯದಲ್ಲಿರುವ ರೈತರ ಮುಂದಾಗಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ನೇಕಾರರ ಸಂಕಷ್ಟಕ್ಕೂ ಮುಂದಾಗಬೇಕೆಂದು ನೇಕಾರರ ಜಾಗೃತಿ ವೇದಿಕೆ ಒತ್ತಾಯಿಸಿದೆ.

ವೇದಿಕೆಯ ರಾಜ್ಯಾಧ್ಯಕ್ಷ ಲಿಂಗರಾಜು ಡಿ.ನೊಣವಿನಕೆರೆ ಅವರು ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಅನ್ನದಾತನ ಜತೆಗೆ ವಸ್ತ್ರದಾತನ (ನೇಕಾರ) ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಳೆದ ಒಂದೂವರೆ ದಶಕಗಳಿಂದ ನೇಕಾರಿಕೆ ಉದ್ದಿಮೆ ಕುಸಿಯುತ್ತಾ ಬಂದಿದೆ. ದುಡಿಯಲು ಬಂಡವಾಳ ಇಲ್ಲದೆ, ಕಾಲವೃತ್ತಿ ನಡೆಸಲು ವಿವಿಧ ಬ್ಯಾಂಕ್‍ಗಳಲ್ಲಿ ಮಾಡಿರುವ ಸಾಲವನ್ನು ತೀರಿಸಲಾಗದೆ ನೇಕಾರರು ತ್ರಿಶಂಕು ಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಸಾಂಪ್ರದಾಯಿಕ ನೇಕಾರಿಕೆ ಇನ್ನೂ ಜೀವಂತವಾಗಿದೆ. ನೇಕಾರರ ಕುಟುಂಬ ಇಂದು ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ನೇಕಾರಿಕೆ ಉಳಿಯಬೇಕಾದರೆ ಫ್ಯಾಷನ್ ಟೆಕ್ನಾಲಜಿ ಕಾಲೇಜು ಸ್ಥಾಪನೆ, ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪನೆಗಳಿಗಿಂತ ದುಡಿಯುವ ಕೈಗಳಿಗೆ ದುಡಿಮೆ ಬಂಡವಾಳ, ನೇಕಾರಿಕೆ ಉತ್ಪನ್ನಗಳಿಗೆ ಮಾರುಕಟ್ಟೆ, ನೇಕಾರನಿಗೆ ಸಮರ್ಪಕವಾದ ಮಜೂರಿ ಹೀಗೆ ಅನೇಕ ಪರಿಹಾರಗಳ ಸಹಾಯ ಹಸ್ತ ಬೇಕಾಗಿದೆ.
ಆದ್ದರಿಂದ ಜುಲೈ ತಿಂಗಳಲ್ಲಿ ಮಂಡನೆಯಾಗಲಿರುವ ಬಜೆಟ್‍ನಲ್ಲಿ ರೈತರ ಸಾಲ ಮನ್ನಾ ಜತೆಗೆ ನೇಕಾರರ ಸಾಲವನ್ನು ಮನ್ನಾ ಘೋಷಿಸಬೇಕು ಎಂದು ವೇದಿಕೆ ರಾಜ್ಯಾಧ್ಯಕ್ಷ ಲಿಂಗರಾಜು ಡಿ.ನೊಣವಿನಕೆರೆ ಅವರು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ