ಕೋಲ್ಕತಾ: 2019ರ ಲೋಕಸಭೆ ಮತ್ತು 2021ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಬಡ ಹಾಗೂ ಮಧ್ಯಮ ವರ್ಗದ ಜನರಿಗಾಗಿ 50 ಸಾವಿರ ಫ್ಲಾಟ್ ಹಂಚಿಕೆ ಯೋಜನೆ ಘೋಷಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮುತ್ತಿದ್ದು, ಕೇಸರಿ ಪಡೆಯನ್ನು ಅಧಿಕಾರದಿಂದ ದೂರವಿಡಲು ದೀದಿ ‘ನಿಜಶ್ರೀ’ ಎಂಬ ಹೊಸ ವಸತಿ ಯೋಜನೆ ಘೋಷಿಸಿದ್ದಾರೆ.
ನಿಜಶ್ರೀ’ ಯೋಜನೆಯಡಿ 50 ಸಾವಿರ 1 ಬಿಎಚ್ ಕೆ ಮತ್ತು 2 ಬಿಎಚ್ ಕೆ ಫ್ಲಾಟ್ ಗಳನ್ನು ನಿರ್ಮಿಸಿ, ಅವುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.
378 ಚದರ ಅಡಿಯ 1 ಬಿಎಚ್ ಕೆ 7.28 ಲಕ್ಷ ರುಪಾಯಿ ಹಾಗೂ 559 ಚದರ ಅಡಿಯ 2 ಬಿಎಚ್ ಕೆಗೆ 9.26 ಲಕ್ಷ ರುಪಾಯಿ ನಿಗದಿಪಡಿಸಲಾಗಿದೆ. ತಿಂಗಳಿಗೆ 15 ಸಾವಿರದಿಂದ 30 ಸಾವಿರ ರುಪಾಯಿ ಸಂಪಾದಿಸುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಕೋಲ್ಕತಾ ಮಹಾನಗರ ಪಾಲಿಕ ಮತ್ತು ನಗರಾಭಿವೃದ್ಧಿ ಇಲಾಖೆ ಅಡಿ ರಾಜ್ಯಾದ್ಯಂತ ಐದು ಮಹಡಿಯ ಅಪಾರ್ಟ್ ಮೆಂಟ್ ಗಳನ್ನು ನಿರ್ಮಿಸಲಾಗುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವ ಫರ್ಹಾದ್ ಹಕಿಮ್ ಅವರು ಹೇಳಿದ್ದಾರೆ.