ಭತ್ತದ ಬೆಳೆಗಳಿಗೆ ತಕ್ಷಣ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚನೆ – ಎಚ್.ಡಿ.ಕುಮಾರಸ್ವಾಮಿ

ರಾಮನಗರ, ಜೂ.21- ಮಂಡ್ಯ ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಕಬ್ಬು ಹಾಗೂ ಭತ್ತದ ಬೆಳೆಗಳಿಗೆ ತಕ್ಷಣ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ತಾಲ್ಲೂಕಿನ ಪೇಟೆ ಕುರುಬರಹಳ್ಳಿಯ ಉದ್ಭವ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಪ್ರಕಾರ ತಮಿಳುನಾಡಿಗೆ ಜೂನ್ ತಿಂಗಳಿನಲ್ಲಿ ಬಿಡಬೇಕಿರುವ ನೀರನ್ನು ಈಗಾಗಲೇ ಬಿಡಲಾಗಿದೆ. ಕಾವೇರಿ ನಿರ್ವಹಣಾ ಮಂಡಳಿ ಆದೇಶಕ್ಕೆ ಕಾಯದೆ ನೀರು ಬಿಡುವಂತೆ ಸೂಚಿಸಲಾಗಿದೆ ಎಂದರು.
ನೀರು ಬಿಡುವುದರಿಂದ ಉಂಟಾಗುವ ತಾಂತ್ರಿಕ ಮತ್ತು ಕಾನೂನು ಸಮಸ್ಯೆ ಜವಾಬ್ದಾರಿಯನ್ನು ತಾನೇ ಹೊರುವುದಾಗಿ ತಿಳಿಸಿದ ಮುಖ್ಯಮಂತ್ರಿ, ಕಾವೇರಿ ನಿರ್ವಹಣಾ ಮಂಡಳಿ ಆದೇಶಕ್ಕೆ ಕಾಯದೆ ಬೆಳೆಗಳಿಗೆ ನೀರು ಬಿಡುವ ಮೂಲಕ ರೈತರನ್ನು ರಕ್ಷಿಸಬೇಕಾಗಿದೆ. ನೀರು ಬಿಡಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಕಾಲುಬಾಯಿ ಜ್ವರದ ಸಮಸ್ಯೆ ಸೇರಿದಂತೆ ರಾಜ್ಯದಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಸರಿಪಡಿಸಲು ಕಾಲಾವಕಾಶ ಬೇಕಿದೆ. ರಾಜ್ಯದ ಯಾವುದೇ ಇಲಾಖೆಯಲ್ಲಿ ಹುದ್ದೆ ಕೊರತೆ ಉಂಟಾಗದಂತೆ ಭರ್ತಿ ಮಾಡಲು ಸಮಯಾವಕಾಶ ಬೇಕಿದೆ ಎಂದು ಅವರು ಹೇಳಿದರು.
ಇನ್ನು 15 ದಿನಗಳ ನಂತರ ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಒಂದೊಂದು ದಿನ ಭೇಟಿ ಕೊಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡಲು ಅವಕಾಶವಿದೆ. ದ್ವೇಷ ರಾಜಕಾರಣದ ಸಮಸ್ಯೆಯನ್ನು ಅವರು ಬಗೆಹರಿಸಿಕೊಳ್ಳುತ್ತಾರೆ. ಕಾನೂನಿನಲ್ಲಿ ಪ್ರತಿಯೊಬ್ಬರಿಗೂ ಹೊರಾಟ ನಡೆಸಲು ಅವಕಾಶವಿದೆ ಅದರಂತೆ ಅವರು ಕೂಡ ಹೋರಾಟ ನಡೆಸುತ್ತಾರೆ ಎಂದರು. ಉದ್ಭವ ಆಂಜನೇಯ ಸ್ವಾಮಿ ದೇವಾಲಯ ಭೇಟಿ ಸಂದರ್ಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಮನಗರದ ಬಳಿ ಇರುವ ಅಂಧರ ಶಾಲೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭೇಟಿ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ