ಮೈಸೂರು, ಜೂ.21- ನಾಲ್ಕನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದಲ್ಲಿ ಇಂದು ಏರ್ಪಡಿಸಲಾಗಿದ್ದ ಯೋಗ ಪ್ರದರ್ಶನ ಯಶಸ್ವಿಯಾಗಿ ನೆರವೇರಿತು. ಬೆಳ್ಳಂಬೆಳಗ್ಗೆ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯೋಗ ಪಟುಗಳು, ಸಾರ್ವಜನಿಕರು ಉತ್ಸಾಹದಿಂದ ಯೋಗದಲ್ಲಿ ಭಾಗವಹಿಸಿ ಯೋಗ ದಿನವನ್ನು ಅರ್ಥಪೂರ್ಣಗೊಳಿಸಿದರು.
ನಗರದ ರೇಸ್‍ಕೋರ್ಸ್ ಮೈದಾನದಲ್ಲಿ ಇಂದು ನಡೆದ ಯೋಗ ಪ್ರದರ್ಶನದಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿ ಯೋಗ ಪ್ರದರ್ಶಿಸಲು ಅನುವಾಗುವಂತೆ 70 ಬ್ಲಾಕ್‍ಗಳನ್ನು ಮಾಡಲಾಗಿತ್ತು. ಒಂದೊಂದು ಬ್ಲಾಕ್‍ನಲ್ಲಿಯೂ 1000 ದಿಂದ 1200 ಮಂದಿ ಕುಳಿತು ಯೋಗಾಸನ ಮಾಡಲು ವ್ಯವಸ್ಥೆಗೊಳಿಸಲಾಗಿತ್ತು.
ಒಂದು ಅಂದಾಜಿನ ಪ್ರಕಾರ, ಮೈಸೂರಿನಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಕಳೆದ ವರ್ಷ 50 ಸಾವಿರ ಮಂದಿ ಏಕಕಾಲದಲ್ಲಿ ಯೋಗ ಪ್ರದರ್ಶಿಸಿ ದೇಶದಲ್ಲೇ ಮೈಸೂರು ಪ್ರಥಮ ಸ್ಥಾನ ಪಡೆದುಕೊಂಡಿತ್ತು.
ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ದೀಪ ಬೆಳಗಿಸುವ ಮೂಲಕ ಯೋಗ ದಿನಾಚರಣೆಗೆ ಅಧಿಕೃತ ಚಾಲನೆ ನೀಡಿದರು. ನಂತರ ಮಾತನಾಡಿದ ಸಚಿವ ಸಾ.ರಾ.ಮಹೇಶ್, ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮಂದಿ ಯೋಗ ಮಾಡಲು ಸೇರುವಂತೆ ಸರ್ಕಾರ ಸೂಚನೆ ನೀಡಿತ್ತು. ಆದರೆ, ಚುನಾವಣೆ ನೀತಿ-ಸಂಹಿತೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಒಟ್ಟಿಗೆ ಸೇರಲು ಸಾಧ್ಯವಾಗದೆ ಸಾಂಕೇತಿಕವಾಗಿ ಯೋಗ ಮಾಡಲಾಗುತ್ತಿದೆ ಎಂದರು.
ಯಾಂತ್ರಿಕ ಜೀವನದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಬೇರೆಯವರಿಗಾಗಿ ಕೆಲಸ ಮಾಡುತ್ತೇವೆ. ನಮಗಾಗಿ ಮಾಡಿಕೊಳ್ಳುವ ಕೆಲಸ ಎಂದರೆ ಯೋಗ ಒಂದೇ. ಯೋಗ ಮಾಡುವುದರಿಂದ ಯಾವುದೇ ರೋಗ ಬರುವುದಿಲ್ಲ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಮೊದಲೇ ಯೋಗ ಮಾಡಿದರೆ ಒಳ್ಳೆಯದು ಎಂದು ಸಲಹೆ ಮಾಡಿದರು.
ಯೊಗ ದಿನಾಚರಣೆ ಅಂಗವಾಗಿ ನಡೆದ ಯೋಗ ಪ್ರದರ್ಶನವನ್ನು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸಲಾಯಿತು. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಾರ್ವಜನಿಕರು ಒಂದೆಡೆ ಸೇರಿ ಯೋಗ ಪ್ರದರ್ಶನ ನಡೆಸಲು ಎಲ್ಲ ರೀತಿಯ ಸುಸಜ್ಜಿತ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಹಾಗಾಗಿ ಯಾವುದೇ ಲೋಪವಿಲ್ಲದಂತೆ ಯೋಗ ಪ್ರದರ್ಶನ ನೆರವೇರಿತು. ಸಣ್ಣಪುಟ್ಟ ಲೋಪಗಳು ಕಂಡುಬರಲಿಲ್ಲ. ಪ್ರಪ್ರಥಮವಾಗಿ ವಾಹನ ನಿಲುಗಡೆ, ಸಾರ್ವಜನಿಕರಿಗೆ ಬಂದು ಹೋಗಲು ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನೂ ಸೂಕ್ತ ರೀತಿಯಲ್ಲಿ ಕಲ್ಪಿಸಲಾಗಿತ್ತು. ಮೈದಾನದ ಏಳು ದ್ವಾರಗಳನ್ನೂ ತೆರೆದು ಯಾವುದೇ ಸಮಸ್ಯೆಯಾಗದಂತೆ ಸಾರ್ವಜನಿಕರಿಗೆ ಯೋಗ ಪ್ರದರ್ಶನಕ್ಕೆ ಅನುವು ಮಾಡಿಕೊಡುವ ಮೂಲಕ ಯಶಸ್ವಿ ಪ್ರದರ್ಶನವಾಗಿಸಲಾಯಿತು. ಕಳೆದ ಬಾರಿ ವಿಶ್ವ ಯೋಗ ದಿನಾಚರಣೆ ಆಯೋಜಿಸಿದ್ದ ಹಿಂದಿನ ಜಿಲ್ಲಾಧಿಕಾರಿ ರಂದೀಪ್, ಸುತ್ತೂರು ಕಿರಿಯ ಶ್ರೀಗಳಾದ ಜಯರಾಜೇಂದ್ರ ಸ್ವಾಮೀಜಿ, ಸಂಸದ ಪ್ರತಾಪ್ ಸಿಂಹ, ಅವರ ಪತ್ನಿ ಅರ್ಪಿತಾ, ಪುತ್ರಿ ವಿವಂಚಿ, ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ, ರವಿಕುಮಾರ್, ಜಿಪಂ ಅಧ್ಯಕ್ಷೆ ಸಹೀನಾ ಸುಲ್ತಾನಾ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು.