ಬೆಂಗಳೂರು, ಜೂ.21-ನನ್ನ ಬಳಿ ಬಿಜೆಪಿ ನಾಯಕರು ನಡೆಸಿರುವ ಅಕ್ರಮಗಳ ಕುರಿತ ಡೈರಿ ಇದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿರುವುದು ಬಿಜೆಪಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಸೂಕ್ತ ಸಂದರ್ಭದಲ್ಲಿ ನಾನು ಎಲ್ಲವನ್ನು ದಾಖಲೆಗಳ ಸಮೇತ ಬಹಿರಂಗ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ನಿನ್ನೆ ಹೇಳಿರುವುದು ಹಲವು ನಾಯಕರಲ್ಲಿ ತಳಮಳ ಉಂಟು ಮಾಡಿದೆ.
ಇದೀಗ ಬಿಜೆಪಿಯಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದ್ದು, ನಾಳೆ ಯಾವ ನಾಯಕರ ಬಣ್ಣ ಬಯಲಾಗಲಿದೆ, ಇನ್ಯಾರಿಗೆ ಕಾನೂನಿನ ಸಂಕಷ್ಟ ಎದುರಾಗಲಿದೆ ಎಂಬ ಆತಂಕ ಮೂಡಿದೆ.
ಅದರಲ್ಲೂ ಶಿವಕುಮಾರ್ ಪರೋಕ್ಷವಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆಯನ್ನು ಗುರಿಯಾಗಿಟ್ಟುಕೊಂಡು ಹೇಳಿರುವುದು ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದೆ.
ಈ ಬೆಳವಣಿಗೆಗಳ ನಡುವೆ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಯಡಿಯೂರಪ್ಪ ನವರ ಅಕ್ರಮ ಆಸ್ತಿಗಳ ಕುರಿತಂತೆ ಸಂಸದೆ ಶೋಭಾ ಕರಂದ್ಲಾಜೆ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಬೇಕೆಂದು ಹೇಳಿರುವುದು ಇನ್ನಷ್ಟು ಅನುಮಾನ ಮೂಡುವಂತೆ ಮಾಡಿದೆ.
ನಾನು ಪುಕ್ಕಟೆ ಪ್ರಚಾರಕ್ಕಾಗಿ ಸುಳ್ಳು ಆರೋಪಗಳನ್ನು ಮಾಡುವುದಿಲ್ಲ. ಯಾರು, ಎಲ್ಲಿ, ಯಾವಾಗ ಭೇಟಿ ಮಾಡಿದ್ದರು, ಎಷ್ಟೆಷ್ಟು ಹಣದ ವಹಿವಾಟು ನಡೆದಿದೆ ಎಂಬುದನ್ನು ಶುಭ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಡಿಕೆಶಿ ಪುನಃ ಇಂದು ಹೇಳಿಕೆ ನೀಡಿದ್ದಾರೆ. ಇದು ಬಿಜೆಪಿ ನಾಯಕರಲ್ಲಿ ಇನ್ನಷ್ಟು ತಳಮಳಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪಕ್ಕೆ ಯಡಿಯೂರಪ್ಪ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇವಲ ಸದಾನಂದಗೌಡ ಹಾಗೂ ಶೋಭಾ ಕರಂದ್ಲಾಜೆ ಮಾತ್ರ ಆರೋಪಕ್ಕೆ ಪ್ರತಿಕ್ರಿಯೆ ಎಂಬಂತೆ ಹೇಳಿಕೆ ನೀಡಿ ಕೈ ತೊಳೆದುಕೊಂಡಿದ್ದಾರೆ.
ಈ ಹಿಂದೆ ಬಿಜೆಪಿ ಅವಧಿಯಲ್ಲಿ ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಇನ್ನು ಸಿಬಿಐ, ಲೋಕಾಯುಕ್ತ ಹಾಗೂ ಎಸ್‍ಐಟಿ ತನಿಖೆಗಳು ನಡೆದಿದ್ದವು. ಮೂಲಗಳ ಪ್ರಕಾರ ಯಡಿಯೂರಪ್ಪನವರ ವ್ಯವಹಾರಗಳ ಸಂಪೂರ್ಣ ಮಾಹಿತಿ ಡಿ.ಕೆ.ಶಿವಕುಮಾರ್ ತಿಳಿದುಕೊಂಡೇ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.
ನಾಳೆ ನಮ್ಮ ನಾಯಕರ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ತನಿಖೆಗೆ ಆದೇಶ ನೀಡಿದರೆ ಏನಾಗಬಹುದೆಂಬ ಚಿಂತೆ ಬಿಜೆಪಿ ನಾಯಕರದ್ದು. ಮುಂದಿನ ತಿಂಗಳು ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಶಿವಕುಮಾರ್ ಪ್ರಕರಣವನ್ನೇ ಮುಂದಿಟ್ಟುಕೊಂಡು ಬಿಜೆಪಿ, ಸರ್ಕಾರದ ಮೇಲೆ ಮುಗಿಬೀಳಲು ಹವಣಿಸುತ್ತಿದೆ. ಆದರೆ ಭ್ರಷ್ಟಾಚಾರದ ದಾಖಲೆಗಳು ನನ್ನ ಬಳಿ ಇದೆ ಎಂದು ಶಿವಕುಮಾರ್ ಹೇಳುತ್ತಿರುವುದು ಬಿಜೆಪಿಯವರ ಬುಡವನ್ನೇ ಅಲುಗಾಡಿಸುವಂತೆ ಮಾಡಿದೆ.
ಶೋಭಾ ಕರಂದ್ಲಾಜೆ ಈ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅದರಲ್ಲೂ ಇಂಧನ ಸಚಿವರಾಗಿದ್ದ ವೇಳೆ ಬೇಡಿಕೆಗಿಂತ ಹೆಚ್ಚಾಗಿ ಹೊರರಾಜ್ಯದಿಂದ ಹೆಚ್ಚಿನ ದರದಲ್ಲಿ ವಿದ್ಯುತ್ ಖರೀದಿ ಮಾಡಿದ್ದರೆಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ವಿಧಾನಸಭೆಯ ಜಂಟಿ ಸದನ ಸಮಿತಿ ತನಿಖೆ ನಡೆಸಿ ಉಭಯ ಸದನಗಳಲ್ಲಿ ವರದಿ ಮಂಡಿಸಿತ್ತು.
ಮೇಲ್ನೋಟಕ್ಕೆ ವಿದ್ಯುತ್ ಖರೀದಿಯಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿದ್ದು, ತನಿಖೆ ನಡೆಸಬೇಕೆಂದು ಸಮಿತಿ ಶಿಫಾರಸು ಮಾಡಿತ್ತು. ಈ ಅಸ್ತ್ರವನ್ನೇ ಬಿಜೆಪಿ ನಾಯಕರ ವಿರುದ್ಧ ತಿರುಗಿಸಲು ಶಿವಕುಮಾರ್ ಸಜ್ಜಾಗಿದ್ದಾರೆ.
ಒಂದು ವೇಳೆ ನನ್ನ ಅಕ್ರಮದ ಬಗ್ಗೆ ಬಿಜೆಪಿ ನಾಯಕರು ಬಾಯಿಬಿಟ್ಟರೆ ಇದನ್ನೇ ತಿರುಗುಬಾಣವಾಗಿಸಲು ಅವರೂ ಕೂಡ ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಅಂಶವೇ ಬಿಜೆಪಿ ನಾಯಕರ ಬಾಯಿ ಬಂದ್ ಆಗುವಂತೆ ಮಾಡಿದೆ.