
ಬೆಂಗಳೂರು, ಜೂ.20-ವಿಧಾನಸಭೆ ಚುನಾವಣೆ, ರಾಜಕೀಯ ಏರಿಳಿತ ಸೇರಿದಂತೆ ವಿವಿಧ ಕಾರಣಗಳಿಗಾಗಿ ಕಳೆದ ನಾಲ್ಕು ತಿಂಗಳಿನಿಂದಲೂ ಗರಬಡಿದಂತಾಗಿರುವ ಆಡಳಿತ ಯಂತ್ರ ಇನ್ನೂ ಚುರುಕುಗೊಂಡಿಲ್ಲ. ಬಜೆಟ್ ಮಂಡನೆಯ ತಯಾರಿಯಿಂದ ಜೂನ್ ತಿಂಗಳಲ್ಲೂ ಕಡತಗಳಿಗೆ ಮುಕ್ತಿ ಕಾಣುವ ಸಾಧ್ಯತೆಗಳು ಕಾಣುತ್ತಿಲ್ಲ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಬರೋಬ್ಬರಿ 28 ದಿನಗಳಾಗಿದೆ. ಮೇ 23 ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಿದರು.
ಜೂನ್ 6 ರಂದು ಮೊದಲ ಹಂತದಲ್ಲಿ ಸಂಪುಟ ವಿಸ್ತರಣೆ ನಡೆದು 25 ಮಂದಿ ಸಚಿವರು ಸೇರ್ಪಡೆಯಾದರು. ಅವರಿಗೆ ಜೂ.8 ರಂದು ಖಾತೆ ಹಂಚಿಕೆ ಮಾಡಲಾಗಿದೆ. ಸಚಿವರಿಗೆ ಹೊಣೆಗಾರಿಕೆ ವಹಿಸಿ 13 ದಿನ ಕಳೆದಿದೆ. ಆದರೆ ಈವರೆಗೂ ಕಡತಗಳ ವಿಲೇವಾರಿ ಕ್ರಮಬದ್ಧವಾಗಿ ನಡೆಯುತ್ತಿಲ್ಲ.
ನೂತನ ಸಚಿವರ ಪೈಕಿ ಎಚ್.ಡಿ.ರೇವಣ್ಣ, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಡಿ.ಸಿ.ತಮ್ಮಣ್ಣ, ಕೃಷ್ಣಭೆರೇಗೌಡ, ಎನ್.ಎಚ್.ಶಿವಶಂಕರರೆಡ್ಡಿ, ಎಸ್.ಎ.ಶ್ರೀನಿವಾಸ್, ಪ್ರಿಯಾಂಕ್ ಖರ್ಗೆ, ಸಿ.ಎಸ್.ಪುಟ್ಟರಾಜು, ಜಮೀರ್ ಅಹಮದ್ ಖಾನ್, ಯು.ಟಿ.ಖಾದರ್, ಸಾ.ರಾ.ಮಹೇಶ್, ಎನ್.ಮಹೇಶ್, ಶಿವಾನಂದ ಪಾಟೀಲ್, ಜಯಮಾಲಾ ಅವರುಗಳು ಅಧಿಕಾರಿಗಳ ಸಭೆ ನಡೆಸಿ ಇಲಾಖೆಯ ಪರಿಚಯ ಮಾಡಿಕೊಂಡಿದ್ದಾರೆ.
ಉಳಿದಂತೆ ಬಂಡೆಪ್ಪ ಕಾಶಂಪೂರ್, ಜಿ.ಟಿ.ದೇವೇಗೌಡ, ಕೆ.ಜೆ.ಜಾರ್ಜ್, ಎಂ.ಸಿ.ಮನಗೂಳಿ, ವೆಂಕಟರಾವ್ ನಾಡಗೌಡ, ವೆಂಕಟರಮಣಪ್ಪ, ರಾಜಶೇಖರ್ ಪಾಟೀಲ್, ಸಿ.ಪುಟ್ಟರಂಗಶೆಟ್ಟಿ ಅವರುಗಳು ವಿಧಾನಸೌಧದತ್ತ ತಲೆ ಹಾಕಿಲ್ಲ. ಬದಲಾಗಿ ಜಿಲ್ಲಾ ಪ್ರವಾಸದಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಈಗಾಗಲೇ ನೂತನ ಬಜೆಟ್ ಮಂಡನೆಗಾಗಿ ತಯಾರಿ ಆರಂಭಿಸಿದ್ದು, ಇಂದಿನಿಂದ ನಿರಂತರವಾಗಿ ಸಭೆಗಳನ್ನು ನಡೆಸಲಿದ್ದಾರೆ. ಜೂ.30ರವರೆಗೂ ನಿರಂತರವಾಗಿ ಬಜೆಟ್ ತಯಾರಿ ಸಭೆಗಳು ನಡೆಯಲಿವೆ.
ಸಚಿವರನ್ನು ಕಾಡುತ್ತಿರುವ ಕಡತಗಳ ಕಡಿತ:
ಈ ನಡುವೆ ಯಾವುದೇ ಇಲಾಖೆಗಳಲ್ಲೂ ಪ್ರಮುಖವಾದ ಕಡತಗಳ ವಿಲೇವಾರಿ ನಡೆಯುತ್ತಿಲ್ಲ. ಎಲ್ಲಾ ಸಚಿವರು ಅಧಿಕಾರಿಗಳ ಸಭೆ, ಇಲಾಖೆ ಪರಿಚಯ, ಬಜೆಟ್ ತಯಾರಿ ಬಗ್ಗೆಯಷ್ಟೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ಮಾ.27ಕ್ಕೆ ಕೇಂದ್ರ ಚುನಾವಣಾ ಆಯೋಗ ವಿಧಾನಸಭಾ ಚುನಾವಣೆ ಘೋಷಣೆ ಮಾಡಿತ್ತು. ಅಂದಿನಿಂದ ಎಲ್ಲಾ ಕಡತಗಳ ವಿಲೇವಾರಿ ಸ್ಥಗಿತಗೊಂಡಿದೆ. ಸರಿಸುಮಾರು ನಾಲ್ಕು ತಿಂಗಳುಗಳಿಂದಲೂ ಕಡತಗಳು ವಿಲೇವಾರಿಯಾಗದೆ ಧೂಳು ತಿನ್ನುತ್ತಿವೆ.
ಮೇ 15ಕ್ಕೆ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ಅತಂತ್ರ ಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ರಾಜಕೀಯ ಮೇಲಾಟಗಳಲ್ಲಿ ಕಾಲಹರಣವಾಯಿತು. ಮೇ 23ಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವವರೆಗೂ ರಾಜಕೀಯ ಸ್ಥಿರತೆಯೇ ಇಲ್ಲದೆ ಆಡಳಿತ ಯಂತ್ರ ಮನಸೋ ಇಚ್ಛೆ ನಡೆಯುತ್ತಿತ್ತು.
ನೂತನ ಸಚಿವರು ಅಧಿಕಾರ ವಹಿಸಿಕೊಂಡ ನಂತರವಾದರೂ ಕಡತಗಳ ವಿಲೇವಾರಿಯಾಗುತ್ತದೆ ಎಂದು ಕಾಯುತ್ತಿದ್ದ ಜನಸಾಮಾನ್ಯರಿಗೆ ನಿರಾಸೆಯಾಗಿದೆ. ಇದು ಒಂದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೆ ಕೆಲವು ಪ್ರಮುಖ ಕಡತಗಳಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿರುತ್ತಿತ್ತು. ಆದರೆ ಮೈತ್ರಿ ಸರ್ಕಾರವಾಗಿರುವುದರಿಂದ ಹಿಂದಿನ ಸರ್ಕಾರದಲ್ಲಿ ಸಚಿವರು ಅನುಸರಿಸಿದ ನೀತಿ-ನಿಯಮಾವಳಿಗಳನ್ನು ಅನುಪಾಲನೆ ಮಾಡಬೇಕಾದ ಇಕ್ಕಟ್ಟಿನಲ್ಲಿ ನೂತನ ಸಚಿವರಿದ್ದಾರೆ.
ಯಾವ ಕಡತ, ಯಾವ ಸಚಿವರಿಗೆ, ಯಾವ ಶಾಸಕರಿಗೆ ಸಂಬಂಧಿಸಿದ್ದೋ, ಯಾವ ನಿರ್ಧಾರದ ಹಿಂದೆ ಯಾರ ಪ್ರಭಾವವಿದೆಯೋ ಎಂಬ ಗೊಂದಲಗಳು ಹೆಚ್ಚಾಗಿವೆ. ಒಂದು ವೇಳೆ ಹೆಚ್ಚು-ಕಮ್ಮಿ ನಿರ್ಧಾರ ತೆಗೆದುಕೊಂಡರೆ ನಾಳೆ ಯಾವ ಮುಖಂಡರಿಂದ ಪ್ರತಿರೋಧ ಎದುರಿಸಬೇಕಾಗುತ್ತದೋ, ತಾವು ತೆಗೆದುಕೊಂಡ ನಿರ್ಧಾರಗಳು ಬಹಿರಂಗ ಚರ್ಚೆಗೆ ಗ್ರಾಸವಾಗಿ ಮೈತ್ರಿ ಸರ್ಕಾರದಲ್ಲಿನ ಸೌಹಾರ್ದತೆ ಧಕ್ಕೆಯಾಗುತ್ತದೆಯೋ ಎಂಬ ದುಗುಡ ಬಹುತೇಕ ಸಚಿವರನ್ನು ಕಾಡುತ್ತಿದೆ.
ಕೆಲವು ಪ್ರಭಾವಿ ಸಚಿವರು ಪರಿಸ್ಥಿತಿ ನಿಭಾಯಿಸುವ ಧೈರ್ಯದೊಂದಿಗೆ ಮುಂದಾದರೂ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿದ್ದಾರೆ. ಪ್ರತಿಯೊಂದು ಕಡತದ ಹಿಂದೆಯೂ ಒಂದೊಂದು ಕಥೆ ಇರುವುದರಿಂದ ಅದನ್ನು ಹೇಳಿ ಸಚಿವರನ್ನು ಹೆದರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಹೀಗಾಗಿ ಅಧಿಕಾರಿಗಳ ಸಾರ್ವತ್ರಿಕ ವರ್ಗಾವಣೆ ಮುಗಿದು ಹೊಸ ಅಧಿಕಾರಿಗಳು ಇಲಾಖೆಗೆ ನಿಯೋಜನೆಗೊಳ್ಳುವವರೆಗೂ ಕಡತಗಳ ಸಹವಾಸವೇ ಬೇಡವೆಂದು ಸಚಿವರು ಸಭೆಗಳಲ್ಲೇ ಕಾಲಕಳೆಯುತ್ತಿದ್ದಾರೆ ಎಂಬ ಮಾತಿದೆ.
ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪುಗೊಳ್ಳುವವರೆಗೂ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ ಎಂದು ಈಗಾಗಲೇ ಕಾಂಗ್ರೆಸ್ ಮುಖಂಡರ ಒತ್ತಡ ಹೇರುತ್ತಿದ್ದಾರೆ.
ಹೀಗಾಗಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಟೇಕಾಫ್ ಆಗದ ಸ್ಥಿತಿ ಇದೆ. ಬಜೆಟ್ ರೂಪುಗೊಳ್ಳುತ್ತಿರುವುದು ಕೂಡ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಒತ್ತಾಸೆಯಿಂದಲೇ ಹೊರತು ಕಾಂಗ್ರೆಸ್ ಬಹುತೇಕ ಸಚಿವರು ಕಾಟಾಚಾರಕ್ಕೆ ಸಹಕರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಹೊಸ ಸರ್ಕಾರ, ಹೊಸ ವ್ಯವಸ್ಥೆ ಎಲ್ಲವೂ ಸಮತೂಕಕ್ಕೆ ಬರಲು ಕಾಲಾವಕಾಶ ಕೊಡಿ ಎಂದು ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಭಾಗವಾಗಿರುವ ಎಲ್ಲಾ ಸಚಿವರು ಮನವಿ ಮಾಡುತ್ತಿದ್ದಾರೆ. ಆದರೆ ಆ ಕಾಲಾವಕಾಶ ಎಷ್ಟು ಎಂಬ ಪ್ರಶ್ನೆ ಕಾಡುತ್ತಿದೆ.
ಕಡತಗಳ ವಿಲೇವಾರಿಯಾಗದೆ, ಪ್ರಮುಖ ನಿರ್ಧಾರ ತೆಗೆದುಕೊಳ್ಳದೆ ಸರ್ಕಾರ ನಿಂತ ನೀರಂತಾಗಿರುವುದು ವ್ಯಾಪಾರೋದ್ಯಮ ಮತ್ತು ಸೇವಾ ವಲಯಗಳ ಮೇಲೆ ದುಷ್ಪರಿಣಾಮ ಬೀರುವುದಂತೂ ನಿಜ.