ಬೆಂಗಳೂರು, ಜೂ.21- ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕಂಟ್ರೋಲ್‍ರೂಂ ಸ್ಥಾಪಿಸಿ ಅಗತ್ಯ ಸಿಬ್ಬಂದಿ ಮತ್ತು ಸಲಕರಣೆಗಳನ್ನು ಸಿದ್ದವಾಗಿಟ್ಟುಕೊಳ್ಳುವುದರ ಜತೆಗೆ ವಾರ್ಡ್ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್‍ಪಾಷ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಸದಸ್ಯರೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮಿತಿಯು ಸದಾ ನಾಗರಿಕರಿಗೆ ಮೂಲಭೂತ ಸೌಕರ್ಯ ಒದಗಿಸಲು ಶ್ರಮಿಸುತ್ತಿದೆ ಎಂದರು.
ನಗರದ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಬೊಮ್ಮನಹಳ್ಳಿ ವಾರ್ಡ್‍ನಲ್ಲಿ ವಿದ್ಯುತ್ ಚಿತಾಗಾರ ಉನ್ನತೀಕರಣಕ್ಕೆ 50 ಲಕ್ಷ ರೂ. ನೀಡಲಾಗಿದೆ. ಒಂದೂವರೆ ಕೋಟಿ ವೆಚ್ಚದಲ್ಲಿ 190ನೆ ವಾರ್ಡ್‍ನಲ್ಲಿ ಡಯಾಲಿಸಿಸ್ ಸೆಂಟರ್ ಸ್ಥಾಪನೆ, 131, 171, 68, 109ನೆ ವಾರ್ಡ್‍ಗಳಲ್ಲಿ ತಲಾ 40 ಲಕ್ಷ ರೂ. ವೆಚ್ಚದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ತಿಳಿಸಿದರು.
ಕರಿಸಂದ್ರ ವಾರ್ಡ್‍ನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ, ವಾರ್ಡ್ ನಂಬರ್ 94ರ ನೆಹರೂ ಪಾರ್ಕ್‍ನಲ್ಲಿ ಎರಡು ಕೋಟಿ ವೆಚ್ಚದಲ್ಲಿ ಆಡಿಟೋರಿಯಂ ನಿರ್ಮಾಣ, ಚಿಕ್ಕಲಾಲ್‍ಬಾಗ್‍ನಲ್ಲಿ ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ಬಹುಪಯೋಗಿ ಕಟ್ಟಡ ನಿರ್ಮಾಣ ಮಾಡಲು ನಮ್ಮ ಸಮಿತಿ ಅನುಮೋದನೆ ನೀಡಿದೆ ಎಂದು ಇಮ್ರಾನ್‍ಪಾಷ ಹೇಳಿದರು.