ಬೆಂಗಳೂರು, ಜೂ.20-ಕಾಂಗ್ರೆಸ್‍ಗೆ ಪೂರ್ಣ ಬಹುಮತ ಬಂದಿಲ್ಲವೆಂದು ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಚಿವ ಯು.ಟಿ.ಖಾದರ್ ಕರೆ ನೀಡಿದರು.
ಅಧಿಕಾರ ಸಿಕ್ಕಿಲ್ಲವೆಂದು ಹತಾಶರಾಗುವುದು ಬೇಡ. ಇಂದಲ್ಲ, ಮುಂದೆ ನಮಗೆ ಅವಕಾಶ ಸಿಗುತ್ತದೆ. ಪಕ್ಷವನ್ನು ಬಲವಾಗಿ ಬೆಳೆಸಬೇಕು. ನಿರಾಸೆಯಿಂದ ಯಾರೂ ತಣ್ಣಗಾಗಬಾರದು ಎಂದು ಹೇಳಿದರು.
ಜನರ ಅಭಿಪ್ರಾಯ ಆರು ತಿಂಗಳು, ವರ್ಷಕ್ಕೆ ಬದಲಾಗುತ್ತಿರುತ್ತದೆ. ಲೋಕಸಭೆ ಚ್ಠುನಾವಣೆ ದೃಷ್ಟಿಯಿಂದ ನಾವೆಲ್ಲ ಒಗ್ಗಟ್ಟಾಗಿ ಪಕ್ಷವನ್ನು ಸಂಘಟಿಸಬೇಕೆಂದು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿತ್ತು. ನಾವು ಮಾಡಿದ ಉತ್ತಮ ಕೆಲಸಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾದೆವು. ಮುಂದೆ ಆಗಾಗದಂತೆ ನೋಡಿಕೊಳ್ಳಬೇಕು ಎಂದರು.
ಸಚಿವ ಸ್ಥಾನ ಪಡೆಯಲು ನಾನು ಯಾವುದೇ ಲಾಬಿ ಮಾಡಲಿಲ್ಲ. ತಾಳ್ಮೆಯಿಂದ ಇದ್ದಿದ್ದಕ್ಕೆ ಅವಕಾಶ ಲಭಿಸಿದೆ. ರಾಜಕೀಯ ಕ್ಷಣಿಕವಲ್ಲ. ಇಲ್ಲಿ ಎಲ್ಲವೂ ಸಾಧ್ಯವಿದೆ ಎಂದರು.
ಸಚಿವರಾದ ಡಿ.ಕೆ.ಶಿವಕುಮಾರ್ ಮೇಲೆ ಪದೇ ಪದೇ ಐಟಿ ದಾಳಿ ನಡೆಸುವುದು, ಕಿರುಕುಳ ನೀಡುವುದು ಕೇಂದ್ರಕ್ಕೆ ಒಳ್ಳೆಯದಲ್ಲ. ಅಧಿಕಾರ ಬರುತ್ತದೆ, ಹೋಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.