ಶ್ರೀನಗರ, ಜೂ.20-ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯನ್ನು ತಕ್ಷಣ ವಿಸರ್ಜಿಸಿ ರಾಜ್ಯದಲ್ಲಿ ಹೊಸ ಚುನಾವಣೆ ನಡೆಸುವಂತೆ ನ್ಯಾಷನಲ್ ಕಾನ್ಫೆರೆನ್ಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಆಗ್ರಹಿಸಿದ್ದಾರೆ.
ಶ್ರೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಸರ್ಕಾರ ರಚನೆಯಾಗಿವ ಸಾಧ್ಯತೆ ಇಲ್ಲ. ಈ ಬಗ್ಗೆ ಮಾಜಿ ಉಪ ಮುಖ್ಯಮಂತ್ರಿ ಬಿಜೆಪಿಯ ಕವೀಂದರ್ ಗುಪ್ತಾ ನೀಡಿರುವ ಗೊಂದಲಕಾರಿ ಹೇಳಿಕೆ ಆಕ್ಷೇಪಾರ್ಹ. ತಮ್ಮ ಪಕ್ಷವು ಸರ್ಕಾರ ರಚನೆಗೆ ಏನೋ ಮಾಡುತ್ತಿದೆ ಎಂದು ಗುಪ್ತಾ ಹೇಳಿಕೆ ನೀಡಿದ್ದಾರೆ. ಏನೋ ಮಾಡುತ್ತಿದೆ ಎಂದರೆ ಏನರ್ಥ. ಇದು ಇತರ ರಾಜಕೀಯ ಪಕ್ಷಗಳ ಸರ್ಕಾರ ರಚನೆ ಯತ್ನಕ್ಕೆ ಅಡ್ಡಿಯುಂಟು ಮಾಡುವಂಥ ಹೇಳಿಕೆಯಾಗಿದೆ ಎಂದು ಟೀಕಿಸಿದರು. ರಾಜ್ಯದ ಹಿತದೃಷ್ಟಿಯಿಂದ ಆದಷ್ಟು ಶೀಘ್ರ ಕಾಶ್ಮೀರ ವಿಧಾನಸಭೆ ವಿಸರ್ಜಿಸಬೇಕು ಹಾಗೂ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಓಮರ್ ಸಲಹೆ ಮಾಡಿದರು.