ಹಿರಿಯೂರು, ಜೂ.20- ಪ್ರವಾಸ ಮುಗಿಸಿಕೊಂಡು ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟರೆ, ತುಮಕೂರು ಬಳಿಯ ಗೂಳೂರು ಸಮೀಪ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ಶಿಕ್ಷಕಿ ಮೃತಪಟ್ಟಿದ್ದಾರೆ.
ಹಿರಿಯೂರು ವರದಿ: ಗೋವಾ ಪ್ರವಾಸ ಮುಗಿಸಿಕೊಂಡು ಕ್ವಾಲಿಸ್ ಕಾರಿನಲ್ಲಿ ವಾಪಸಾಗುತ್ತಿದ್ದಾಗ ರಸ್ತೆ ಬದಿ ನಿಂತಿದ್ದ ಲಾರಿ ಇವರ ಗಮನಕ್ಕೆ ಬರದೆ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ದುರ್ಘಟನೆ ಇಂದು ಮುಂಜಾನೆ ಹಿರಿಯೂರು ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಮಿಳುನಾಡು ಮೂಲದ ಸದ್ದಾಮ್ಹುಸೇನ್ (22), ಸದ್ದಾಮ್ (21), ತೌಸಿಫ್ ಅಹಮ್ಮದ್ (24), ಶಾರುಕ್ (20) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಘಟನೆಯಲ್ಲಿ ಅಬ್ದುಲ್ ರಹೀಮ್ (19), ಮಹಮ್ಮದ್ ಆಲಿ (20), ಸಯ್ಯದ್ ಮೀರನ್ (20) ಮತ್ತು ಆಸಿಫ್ ಅಹಮ್ಮದ್ (20) ಗಂಭೀರ ಗಾಯಗೊಂಡಿದ್ದು, ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ತಮಿಳು ನೋಂದಣಿ ಹೊಂದಿರುವ ಕ್ವಾಲಿಸ್ ವಾಹನದಲ್ಲಿ ಇವರೆಲ್ಲರೂ ಒಟ್ಟಾಗಿ ಗೋವಾ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ಇಂದು ಮುಂಜಾನೆ ತಮಿಳುನಾಡಿಗೆ ವಾಪಸಾಗುತ್ತಿದ್ದಾಗ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜೆಜೆ ಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿ ಯಾವುದೇ ಬ್ಲಿಂಕಿಂಗ್ ಲೈಟ್ ಅಳವಡಿಸದೆ ನಿಲ್ಲಿಸಲಾಗಿದ್ದ ಲಾರಿ ಇವರ ಗಮನಕ್ಕೆ ಬಾರದೆ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟ ನಾಲ್ವರ ಶವಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಅಪಘಾತದ ತೀವ್ರತೆಗೆ ನಾಲ್ವರ ದೇಹಗಳು ಛಿದ್ರಛಿದ್ರವಾಗಿವೆ. ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ವಾಹನದೊಳಗೆ ಸಿಕ್ಕಿಕೊಂಡಿದ್ದ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ವರದಿ: ಪತಿ-ಮಗುವಿನೊಂದಿಗೆ ತೋಟದ ಮನೆಗೆ ಹೋಗಿ ಕಾರಿನಲ್ಲಿ ರಾತ್ರಿ ವಾಪಸಾಗುತ್ತಿದ್ದಾಗ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದ ಪರಿಣಾಮ ಶಿಕ್ಷಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗ್ರಾಮಾಂತರ ಠಾಣೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತುಮಕೂರು ಖಾಸಗಿ ಶಾಲೆಯ ಶಿಕ್ಷಕಿ ವಿನುತಾ (28) ಮೃತಪಟ್ಟ ದುರ್ದೈವಿ. ಘಟನೆಯಲ್ಲಿ ಪತಿ ರಾಘವೇಂದ್ರ (38), ಪುತ್ರಿ ಶ್ರಾವ್ಯ (4) ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತುಮಕೂರು ತಾಲೂಕಿನ ಗೂಳೂರು ಬಳಿ ಇರುವ ತೋಟದ ಮನೆಗೆ ದಂಪತಿ ಹಾಗೂ ಪುತ್ರಿ ಹೋಗಿದ್ದು, ರಾತ್ರಿ ಊಟ ಮುಗಿಸಿಕೊಂಡು ತುಮಕೂರು ನಗರಕ್ಕೆ ವಾಪಸಾಗುತ್ತಿದ್ದಾಗ ಡಿವೈಡರ್ಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಕಾರು ಉರುಳಿ ಬಿದ್ದ ಪರಿಣಾಮ ವಿನುತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಳಗಿನ ಜಾವ ಈ ಘಟನೆ ಬೆಳಕಿಗೆ ಬಂದಿದ್ದು, ಸುದ್ದಿ ತಿಳಿದ ಸಬ್ಇನ್ಸ್ಪೆಕ್ಟರ್ ಸೂನಾರ್, ವೃತ್ತ ನಿರೀಕ್ಷಕ ಮಧುಸೂದನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.