ಕಾಂಗ್ರೆಸ್‍ನ ಟ್ರಬಲ್‍ಶೂಟರ್‍ಗೆ ಹವಾಲಾ ಟ್ರಬಲ್

 

ಬೆಂಗಳೂರು,ಜೂ.20- ಕಾಂಗ್ರೆಸ್‍ನ ಟ್ರಬಲ್‍ಶೂಟರ್ ಎಂದೇ ಖ್ಯಾತಿಯಾಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹವಾಲಾ ಚಟುವಟಿಕೆಯಲ್ಲಿ ತೊಡಗಿರುವುದನ್ನು ಆದಾಯ ಇಲಾಖೆ(ಐಟಿ) ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. g
ಜೀವನ್ ನೀಲರಗಿ ಎಂಬ ವಕೀಲರು ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ನೀಡಿರುವ ದೂರಿನಲ್ಲಿ ಡಿ.ಕೆ.ಶಿವಕುಮಾರ್ ಕಾನೂನುಬಾಹಿರವಾಗಿ ಆರ್ಥಿಕ ವ್ಯವಹಾರ ನಡೆಸಿರುವುದು ಮತ್ತು ಹವಾಲಾ ದಂಧೆಯಲ್ಲೂ ತೊಡಗಿದ್ದಾರೆ ಎಂದು ದಾಖಲೆಗಳ ಸಮೇತ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ನಿನ್ನೆಯಷ್ಟೇ ಬೆಂಗಳೂರಿನ ಅರ್ಥಿಕ ಅಪರಾಧ ನ್ಯಾಯಾಲಯ ಆಗಸ್ಟ್ 2ರಂದು ಹಾಜರಾಗುವಂತೆ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವ ಆಪ್ತರಾದ ಸಚಿನ್ ನಾರಾಯಣ್, ಆಂಜನೇಯ, ಸುನೀಲ್‍ಕುಮಾರ್ ಶರ್ಮ ವಿರುದ್ಧ ಐಟಿ ಕಾಯ್ದೆ ಸೆಕ್ಷನ್ 277, 278, 193, 199 ಹಾಗೂ 120/ಬಿ ಅಡಿ ದೂರು ದಾಖಲಿಸಿ ವಿಚಾರಣೆಗೆ ಹಾಜರಾಗಬೇಕೆಂದು ನ್ಯಾಯಮೂರ್ತಿ ಎಂ.ಎಸ್.ಆಳ್ವ ಸಮನ್ಸ್ ಜಾರಿ ಮಾಡಿದ್ದರು.

 

ಬೆಳವಣಿಗೆಗಳ ನಡುವೆಯೇ ಐಟಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರ ವ್ಯಾಪಾರ ವಹಿವಾಟುಗಳನ್ನು ನೋಡಿಕೊಳ್ಳುತ್ತಿದ್ದ ರಾಜೇಂದ್ರ ಎಂಬುವರ ಮನೆಯಲ್ಲಿ ಸಿಕ್ಕಿದ್ದ ಡೈರಿ ಹಾಗೂ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಕೆಲ ಸ್ಪೋಟಕ ಮಾಹಿತಿಗಳು ಬಹಿರಂಗಗೊಂಡಿವೆ.

ರಾಜೇಂದ್ರ ಅವರ ಡೈರಿಯಲ್ಲಿ ಉಲ್ಲೇಖವಾಗಿರುವಂತೆ ಈ ಹಿಂದೆ ದೆಹಲಿಯ ಸಫ್ತರ್‍ಜಂಗ್ ಬಳಿಯ ನಾಲ್ಕು ಫ್ಲಾಟ್‍ಗಳಲ್ಲಿ ಸಿಕ್ಕಿದ್ದ 8.68 ಕೋಟಿ ನಗದು ಶಿವಕುಮಾರ್ ಅವರಿಗೆ ಸೇರಿದ್ದು ಎಂಬುದನ್ನು ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಏಳು ತಿಂಗಳ ನಂತರ ರಾಜೇಂದ್ರ ಮತ್ತು ಸಚಿನ್ ನಾರಾಯಣ್ ಐಟಿ ಅಧಿಕಾರಿಗಳ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಫ್ತರ್‍ಜಂಗ್‍ನ ಬಿ5 ಫ್ಲಾಟ್‍ನಲ್ಲಿ 6.6 ಕೋಟಿ, ಬಿ4ನಲ್ಲಿ 1.50 ಕೋಟಿ ಹಾಗೂ ನನ್ನ ಮನೆಯಲ್ಲಿ 12.44 ಲಕ್ಷ ಸಿಕ್ಕಿರುವ ನಗದು ಶಿವಕುಮಾರ್ ಅವರಿಗೆ ಸೇರಿದ್ದಾಗಿದೆ.

ಇನ್ನು ಕರ್ನಾಟಕ ಭವನದ ಸಂಪರ್ಕಾಧಿಕಾರಿಯಾಗಿರುವ ಆಂಜನೇಯ ಐಟಿ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿರುವಂತೆ ಸುನೀಲ್‍ಕುಮಾರ್ ಶರ್ಮ ಶಿವಕುಮಾರ್ ಅವರ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು.
ಶರ್ಮ ಟ್ರಾವೆಲ್ಸ್ ವ್ಯವಹಾರವನ್ನು ಇವರೇ ನಿಭಾಯಿಸುತ್ತಿದ್ದರು ಐಟಿ ಅಧಿಕಾರಿಗಳು ದಾಳಿ ಮಾಡಿದ ವೇಳೆ ಸಿಕ್ಕ 44 ಲಕ್ಷ ಹಣ ಇವರಿಗೆ ಸೇರಿತ್ತು. ಅಲ್ಲದೆ ದೆಹಲಿಯಲ್ಲಿ ಖರೀದಸಿರುವ 4ಫ್ಲಾಟ್‍ಗಳು ಅಕ್ರಮದ ಹಣವನ್ನು ಇಡಲು ಖರೀದಿ ಮಾಡಲಾಗಿತ್ತೆಂದು ಹೇಳಿದ್ದಾರೆ.
ಮೊದಲು ದಾಳಿ ಮಾಡಿದ ವೇಳೆ ನಾವು ಕೆಲವು ಒತ್ತಡಗಳಿಂದ ಸುಳ್ಳು ಹೇಳಿದೆವು. ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ಎಲ್ಲ ಹಣವು ಅವರಿಗೆ ಸೇರಿದ್ದೆಂದು ಹೇಳಿಕೆ ನೀಡಿದ್ದಾರೆಂದು ಗೊತ್ತಾಗಿದೆ.

ಕಾರ್ಗೋ ವರ್ಡ್:
ಇನ್ನು ಶಿವಕುಮಾರ್ ತಮ್ಮ ಅಕ್ರಮ ವಹಿವಾಟು ನಡೆಸಲು ಕೆಲವು ಗುಪ್ತ ಸಂಕೇತಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ. ಕಾರ್ಗೋ ವರ್ಡ್ ಎಂಬ ಹೆಸರಿನಡಿ ವಿದೇಶದ ಬ್ಯಾಂಕ್‍ಗಳಿಗೆ ಹಣ ರವಾನೆಯಾಗಿರುವುದು ಹಾಗೂ ಎಐಸಿಸಿಗೆ 5 ಕೋಟಿ ಹಣವನ್ನು ನೀಡಿರುವುದು ಪತ್ತೆಯಾಗಿದೆ.
ಹವಾಲಾ ಚಟುವಟಿಕೆಯಲ್ಲಿ ಡಿಕೆಶಿ ತೊಡಗಿಕೊಂಡಿದ್ದು ವಿದೇಶಿ ಬ್ಯಾಂಕ್‍ಗಳಲ್ಲೂ ಹಣ ಇಟ್ಟಿದ್ದಾರೆ ಎಂದು ಗೊತ್ತಾಗಿದೆ.
ಕೆಜಿ ಎಂಬ ಗುಪ್ತಾಕ್ಷರ ಬಳಸುತ್ತಿದ್ದ ಇವರು ತಮ್ಮ ವಹಿವಾಟಿಗೆ ಈ ಸಂಕೇತವನ್ನೇ ಬಳಸಿಕೊಳ್ಳುತ್ತಿದ್ದರು. ಒಂದು ಕೆಜಿ ಎಂದರೆ ಒಂದು ಕೋಟಿ ಎಂದರ್ಥ. ಈ ಪ್ರಕಾರ ಶಿವಕುಮಾರ್ ಐದು ಕೋಟಿ ನಗದು ಹಾಗೂ ಕೆಲವು ಮುಖಂರಿಗೂ ಹಣ ನೀಡಿದ್ದಾರೆ.
ಅಕ್ರಮ ಹಣವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡು ದೆಹಲಿಯ ಎಎನ್ ಬಿಲ್ಡರ್ ಅಜಯ್ ಖನ್ನಾ ಜೊತೆ ವ್ಯವಹಾರ ನಡೆಸಿರುವುದು ಪತ್ತೆಯಾಗಿದೆ. ಈಗಾಗಲೇ ಐಟಿ ಅಧಿಕಾರಿಗಳು ಬಿಲ್ಡರ್ ಅಜಯ್ ಖನ್ನಾ ಅವರಿಂದಲೂ ಮಾಹಿತಿ ಪಡೆದಿದ್ದಾರೆ.
ಒಂದೆಡೆ ಸಮ್ಮಿಶ್ರ ಸರ್ಕಾರ ಟೇಕಫ್ ಆಗಲು ಸರ್ಕಸ್ ನಡೆಸುತ್ತಿರುವ ಬೆನ್ನಲೇ ಶಿವಕುಮಾರ್ ವಿರುದ್ಧ ದೂರು ದಾಖಲಾಗಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈ ಹಿಂದೆ 2017 , ಅಕ್ಟೊಬರ್ 2ರಂದು ಶಿವಕುಮಾರ್ ಹಾಗೂ ಅವರ ಸಂಬಂಧಿಕರ ಮೇಲೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ