
ಮೈಸೂರು, ಜೂ. 20 – ಸದ್ದು ಮಾಡದೆ ಬಂದು ಕೋಳಿಗಳನ್ನು ಕದ್ದೊಯ್ದ ಚಿರತೆಯ ಬಗ್ಗೆ ಜನರಲ್ಲಿ ಆತಂಕ ಮೂಡಿದೆ. ತಾಲೂಕಿನ ಕುಮಾರಬೀಡು ಗ್ರಾಮದಲ್ಲಿ ಕಳ್ಳ ಚಿರತೆ ಪ್ರತ್ಯಕ್ಷವಾಗಿದ್ದು, ಇದರ ಕೃತ್ಯ ಕಂಡು ಜನ ಭಯಭೀತರಾಗಿದ್ದಾರೆ. ಗ್ರಾಮದ ಚೆನ್ನಯ್ಯ ಎಂಬುವರ ಮನೆಯಲ್ಲಿದ್ದ ಕೋಳಿಗಳು ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಚನ್ನಯ್ಯ ತಮ್ಮ ಸಿಸಿ ಟಿವಿ ವೀಕ್ಷಿಸಿದಾಗ ಅದರಲ್ಲಿ ಚಿರತೆಯೊಂದು ಮನೆ ಬಳಿ ಬಂದು ಕೋಳಿ ಎತ್ತಿಕೊಂಡು ಹೋಗಿರುವುದು ಕಂಡುಬಂದಿದೆ. ಇದರಿಂದ ದಿಗ್ಭ್ರಾಂತರಾದ ಮನೆಯವರಿಗೆ ಹಲವು ದಿನಗಳಿಂದ ಗ್ರಾಮದಾದ್ಯಂತ ಕಾಣೆಯಾಗುತ್ತಿದ್ದ ಕೋಳಿಗಳ ಕಳವು ಮಾಡಿದ್ದು ಚಿರತೆ ಎಂಬುದು ಮನವರಿಕೆಯಾಗುತ್ತಿದ್ದಂತೆ ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದಾರೆ. ಕೂಡಲೇ ಚಿರತೆ ಹಿಡಿದು ಗ್ರಾಮಸ್ಥರನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ.