ನವದೆಹಲಿ, ಜೂ.20-ಮುಂದಿನ 2022ರ ವೇಳೆಗೆ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಸಾಧನೆಗಾಗಿ ನಮ್ಮ ಸರ್ಕಾರವು ಕೃಷಿ ಬಜೆಟ್ನನ್ನು 2.12 ಲಕ್ಷ ಕೋಟಿ ರೂ.ಗಳಿಗೆ ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ 600ಕ್ಕೂ ಹೆಚ್ಚು ಜಿಲ್ಲೆಗಳ ರೈತರೊಂದಿಗೆ ಇಂದು ಸಂವಾದ ನಡೆಸಿದ ಮೋದಿ, ಕೃಷಿ ಆದಾಯವನ್ನು ಹೆಚ್ಚಿಸಲು ನಮ್ಮ ಸರ್ಕಾರ ಮಹತ್ವದ ಯೋಜನೆಗಳನ್ನು ರೂಪಿಸಿದೆ. ಇದರಲ್ಲಿ ನಾಲ್ಕು ಮುಖ್ಯ ಸೂತ್ರಗಳಿವೆ, ಕೃಷಿ ಹೂಡಿಕೆ ವೆಚ್ಚ ಕಡಿತ, ಬೆಳೆಗೆ ಬೆಂಬಲ ಬೆಲೆ, ವ್ಯವಸಾಯೋತ್ಪನ್ನ ಕೊಳೆಯುವಿಕೆ ನಿಯಂತ್ರಣ ಹಾಗೂ ಪರ್ಯಾಯ ಆದಾಯ ಮೂಲಗಳ ಸೃಷ್ಟಿ-ಈ ನಾಲ್ಕಂಶ ಸೂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಈ ಹಿಂದೆ ಐದು ವರ್ಷಗಳ ಯುಪಿಎ ಆಡಳಿತಾವಧಿಗೆ ಹೋಲಿಸಿದಲ್ಲಿ, ನಮ್ಮ ಸರ್ಕಾರವು ನಾಲ್ಕು ವರ್ಷಗಳ ಅವಧಿಯಲ್ಲೇ ಕೃಷಿ ಬಜೆಟ್ನನ್ನು 2.12 ಲಕ್ಷ ಕೋಟಿ ರೂ.ಗಳಿಗೆ ದ್ವಿಗುಣ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ ಎಂದು ಹೇಳಿದರು. ರೈತರ ಉತ್ಪಾದನಾ ವೆಚ್ಚಕ್ಕೆ ಶೇಕಡ 150ರಷ್ಟು ಸಮನಾಂತರ ಪ್ರಮಾಣದ ಬೆಲೆ ಒದಗಿಸಲು ಸರ್ಕಾರ 2018-19ರ ಬಜೆಟ್ನಲ್ಲಿ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಕೃಷಿ ಸಮುದಾಯಕ್ಕೆ ಸಂವಾದದ ವೇಳೆ ಮಾಹಿತಿ ನೀಡಿದರು.
2022ರ ವೇಳೆಗೆ ಶ್ರಮಿಕ ರೈತರ ವರಮಾನ ದ್ವಿಗುಣಗೊಳ್ಳಬೇಕೆಂಬುದು ನಮ್ಮ ಮಹತ್ವಾಕಾಂಕ್ಷೆಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗುತ್ತಿದ್ದೇವೆ. ಇದಕ್ಕಾಗಿ ಅಗತ್ಯವಿರುವ ಕಡೆಗಳಲ್ಲಿ ಸೂಕ್ತ ನೆರವಿಗೆ ನಾವು ಅನುವು ಮಾಡಿಕೊಡುತ್ತಿದ್ದೇವೆ. ದೇಶದ ಅನ್ನದಾತರಲ್ಲಿ ನಮಗೆ ಅಪಾರ ಗೌರವ ಮತ್ತು ವಿಶ್ವಾಸವಿದೆ ಎಂದು ಮೋದಿ ಹೇಳಿದರು.
ದೇಶವು ದಾಖಲೆ ಪ್ರಮಾಣದ ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಮಾತ್ರ ಸಾಧನೆ ಮಾಡಿರುವುದಲ್ಲದೇ, ಹಾಲು, ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯಲ್ಲೂ ಸರ್ವಕಾಲಿಕ ದಾಖಲೆ ಮಾಡಿದೆ. 2017-18ರಲ್ಲಿ 280 ದಶಲಕ್ಷ ಟನ್ನುಗಳಷ್ಟು ಆಹಾರ ಧಾನ್ಯ ಉತ್ಪಾದಿಸಲಾಗಿದೆ. 2010 ಮತ್ತು 2014ರ ನಡುವೆ 250 ದಶಲಕ್ಷ ಟನ್ನುಗಳಷ್ಟು ಉತ್ಪಾದನೆಯಾಗಿತ್ತು. ಬೇಳೆಕಾಳುಗಳು ಮತ್ತು ದ್ವಿದಳ ಧಾನ್ಯಗಳ ಉತ್ಪಾದನೆಯು ಶೇ.10.5ರಷ್ಟು ಹೆಚ್ಚಾಗಿದೆ ಎಂದು ಪ್ರಧಾನಿ ವಿವರಿಸಿದರು.
ರೈತರಿಗೆ ಕೃಷಿ ಚಟುವಟಿಕೆಯ ಎಲ್ಲ ಹಂತಗಳಲ್ಲೂ ಅಂದರೆ ಬಿತ್ತನೆಗೆ ಮುನ್ನ ಬಿತ್ತನೆ ವೇಳೆ ಮತ್ತು ನಂತರ ಹಾಗೂ ಕಟಾವಿನ ವೇಳೆ ಅಗತ್ಯವಾದ ಸಕಲ ನೆರವು ನೀಡಲಾಗುವುದು. ಅನ್ನದಾತರಿಗೆ ಬೀಜ ಪೂರೈಕೆಯಿಂದ ಮೊದಲ್ಗೊಂಡು ಅವರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಗಳನ್ನು ಒದಗಿಸುವ ತನಕ ನೆರವು ನೀಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಮೋದಿ ಹೇಳಿದರು.
ತಮ್ಮ ಹಿಡುವಳಿ ಭೂಮಿಯ ಮಣ್ಣಿನ ಸಾರ ಮತು ಪೆÇೀಷಕಾಂಶ ಸ್ಥಿತಿಗತಿ ತಿಳಿಯಲು ರೈತರಿಗೆ ನೆರವಾಗುವ ಉದ್ದೇಶದಿಂದ ಮಣ್ಣಿ ಆರೋಗ್ಯ ಚೀಟಿಗಳನ್ನು ನಾವು ನೀಡಿದೆವು. ನಂತರ ಉತ್ತಮ ಗುಣಮಟ್ಟದ ಬೀಜಗಳನ್ನು ಕೊಳ್ಳಲು ಅವರಿಗೆ ಸಾಲ ಸೌಲಭ್ಯಗಳನ್ನು ಒದಗಿಸಿದೆವು ಎಂದು ಅವರು ತಿಳಿಸಿದರು.
ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಪಡೆಯುವುದನ್ನು ಖಾತರಿಗೊಳಿಸಲು ಮಧ್ಯವರ್ತಿಗಳು ಹಾಗೂ ಕಾಳಸಂತೆ ನಿಯಂತ್ರಣಕ್ಕಾಗಿ ಆನ್ಲೈನ್ ಪ್ಲಾಟ್ಫಾರಂ ಇ-ನೀಮ್ ಸೌಲಭ್ಯವನ್ನು ಆರಂಭಿಸಲಾಗಿದೆ. ಯೂರಿಯಾಗೆ ನಿಂಬೆ ಲೇಪನದ ಮೂಲಕ ಬೆಳೆ ಸಾರ ಮತ್ತು ಪೌಷ್ಠಿಕಾಂಶ ಹೆಚ್ಚಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.