ಬೆಂಗಳೂರು, ಜೂ.20- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಐದು ವರ್ಷಗಳಲ್ಲಿ ವಿವಿಧ ಮೂಲಗಳಿಂದ 1417 ಕೋಟಿ ತೆರಿಗೆ ಸಂಗ್ರಹ ಮಾಡುವ ಮೂಲಕ ದಾಖಲೆ ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆನ್‍ಲೈನ್, ಚಲನ್ ಮೂಲಕ 1417 ಕೋಟಿ ಸಂಗ್ರಹಿಸಲಾಗಿದೆ. ಆನ್‍ಲೈನ್ ಮೂಲಕ 423 ಕೋಟಿ, ಚಲನ್ ಮೂಲಕ 986 ಕೋಟಿ, ನ್ಯಾಯಾಲಯದ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ 1.63 ಕೋಟಿ, ಚೆಕ್‍ಗಳ ರಿಯಲೈಸೇಷನ್ ಮೂಲಕ 29 ಕೋಟಿ ಸೇರಿದಂತೆ ಸುಮಾರು 1444 ಕೋಟಿ ರೂ.ಗಳನ್ನು ಜೂನ್ 20ಕ್ಕೆ ಅಂತ್ಯಗೊಂಡಂತೆ ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ಅವರು ವಿವರಗಳನ್ನು ನೀಡಿದರು.
19ಕ್ಕೂ ಹೆಚ್ಚು ಆಸ್ತಿಗಳನ್ನು ಜಿಐಎಸ್ ವ್ಯಾಪ್ತಿಗೆ ತರಲಾಗಿದ್ದು, 18.35 ಲಕ್ಷ ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಎಲ್ಲ ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡಲಾಗುವುದು. ಇದರಿಂದ ಸಂಪನ್ಮೂಲದ ಪ್ರಮಾಣ ಮತ್ತಷ್ಟು ಹೆಚ್ಚುತ್ತದೆ ಎಂದು ಅವರು ಹೇಳಿದರು.
2017-18ನೆ ಸಾಲಿನಲ್ಲಿ ನೂರಕ್ಕೂ ಹೆಚ್ಚು ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೆ ಮಾಡಿದ್ದು, ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ಸಂಬಂಧಿಸಿದಂತೆ 180 ಕೋಟಿಗೂ ಹೆಚ್ಚಿನ ಆದಾಯ ಗುರುತಿಸಿದೆ. ದಂಡ ಮತ್ತು ಬಡ್ಡಿ ಸೇರಿ 559 ಕೋಟಿ ವಸೂಲು ಮಾಡಲು ತೀರ್ಮಾನಿಸಲಾಗಿದೆ.
ಟೋಟಲ್ ಸ್ಟೇಷನ್ ಸರ್ವೆ ಪರಿಣಾಮ ಎಸ್‍ಜೆಆರ್ ಇನ್ಫ್ರಾಸ್ಟ್ರಕ್ಚರ್ ಪ್ರೈ.ಲಿ., ಇನ್‍ಫರ್ಮೇಷನ್ ಟೆಕ್ನಾಲಜಿ ಪಾರ್ಕ್ ಲಿ., ಐಟಿಪಿಎಲ್, ಎಲ್‍ಎಕ್ಸ್‍ಆರ್ ಎಂಟರ್‍ಪ್ರೈಸಸ್, ಎಸ್‍ಎಪಿ ಲ್ಯಾಪ್ಸ್ ಸೇರಿದಂತೆ ಹತ್ತು ಪ್ರಾಪರ್ಟಿಗಳಿಂದ 63 ಕೋಟಿಯಷ್ಟು ತೆರಿಗೆ ಸಂಗ್ರಹವಾಗಿದೆ.
2018-19ನೆ ಸಾಲಿನಲ್ಲಿ ಎಂಟು ವಲಯಗಳಲ್ಲಿ ಹೆಚ್ಚು ವಿಸ್ತೀರ್ಣ ಹೊಂದಿರುವ ಪ್ರತಿ ವಲಯದ ನೂರು ಆಸ್ತಿಗಳನ್ನು ಗುರುತಿಸಿ, 800 ಆಸ್ತಿಗಳನ್ನು ಟೋಟಲ್ ಸರ್ವೆ ಮಾಡಿಸಿ ವರ್ಷಕ್ಕೆ ಸುಮಾರು 300 ಕೋಟಿ ರೂ. ವರಮಾನ ನಿರೀಕ್ಷೆ ಮಾಡಲಾಗಿದೆ ಎಂದು ಅವರು ಹೇಳಿದರು.