
ಶಿರಸಿ: ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಅರಣ್ಯ ಹಕ್ಕು ಕಾಯಿದೆಗೆ ಸಂಬಂಧಿಸಿದ ರಿಟ್ ಅರ್ಜಿಯಲ್ಲಿ ಕರ್ನಾಟಕ ಸರ್ಕಾರ ನಿಗದಿತ ಅವಧಿಯಲ್ಲಿ ಮಾಹಿತಿಯ ಅಂಶವನ್ನು ದಾಖಲಿಸದೇ ಇರುವುದರಿಂದ ಕರ್ನಾಟಕ ಸರ್ಕಾರಕ್ಕೆ ರೂ. 50 ಸಾವಿರ ದಂಡ ಪಾವತಿಸುವುದರೊಂದಿಗೆ 2 ವಾರದ ಕಾಲದ ಅವಧಿ ಒಳಗೆ ಪ್ರಮಾಣಪತ್ರ ಸಲ್ಲಿಸಲು ಆದೇಶಿಸಿದೆ ಎಂದು ಜಿಲ್ಲಾ ಅರಣ್ಯ ಅತಿಕ್ರಮಣದಾರರ ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ವನ್ಯಜೀವಿ ಟ್ರಸ್ಟ ಹಾಗೂ ಇನ್ನಿತರ ಸರ್ಕಾರೇತರ ಸಂಸ್ಥೆಗಳು ಅರಣ್ಯ ಹಕ್ಕು ಕಾಯಿದೆಯಲ್ಲಿ ತಿರಸ್ಕೃತಗೊಂಡ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಿ ಸದ್ರಿ ಅತಿಕ್ರಮಿಸಿರುವ ಕ್ಷೇತ್ರಗಳನ್ನು ಅರಣ್ಯೀಕೃತಗೊಳಿಸಬೇಕೆಂಬ ನಿರ್ದೇಶನವನ್ನು ಎಲ್ಲಾ ರಾಜ್ಯಗಳಿಗೂ ಆದೇಶಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದು ಸದ್ರಿ ಒಕ್ಕಲೆಬ್ಬಿಸುವ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದಿಂದಲೇ ಸೂಕ್ತ ಮಾಹಿತಿ ಪ್ರಮಾಣಪತ್ರ ಅಪೇಕ್ಷಿಸಿದ್ದು ರಾಜ್ಯ ಸರ್ಕಾರವು ಸದ್ರಿ ಅವಧಿಯ ಒಳಗೆ ಪ್ರಮಾಣಪತ್ರ ಸಲ್ಲಿಸಲು ವೈಫಲ್ಯವಾಗಿರುವುದರಿಂದ ಮೇಲಿನಂತೆ ಆದೇಶ ನೀಡಿದೆ.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಹಕ್ಕು ಪಡೆದಂತಹವರ ವಿವರ, ತಿರಸ್ಕಾರಗೊಂಡಿರುವ ಮಾಹಿತಿ, ಮಂಜೂರಿ ಮತ್ತು ತಿರಸ್ಕೃತವಾಗಿರುವ ಒಟ್ಟೂ ಕ್ಷೇತ್ರ, ತಿರಸ್ಕಾರಗೊಂಡಿರುವ ಅರ್ಜಿಗಳಿಗೆ ಒಕ್ಕಲೆಬ್ಬಿಸುವ ದಿಶೆಯಲ್ಲಿ ತೆಗೆದುಕೊಂಡ ಕ್ರಮದ ಹಂತ, ಇಲ್ಲಿಯವರೆಗೆ ಒಕ್ಕಲೆಬ್ಬಿಸಿರುವ ಒಟ್ಟೂ ಕ್ಷೇತ್ರ ಹಾಗೂ ಒಕ್ಕಲೆಬ್ಬಿಸದೇ ಇರಲು ಆಗಿರುವ ವಿಳಂಬದ ಕಾರಣ ಮಾಹಿತಿಯೊಂದಿಗೆ 2 ವಾರಗಳಲ್ಲಿ ದೇಶದ ಪ್ರತಿಯೊಂದು ರಾಜ್ಯ ಸರ್ಕಾರಕ್ಕೂ ಸರ್ವೋಚ್ಛ ನ್ಯಾಯಾಲಯವು ಪ್ರಮಾಣಪತ್ರವನ್ನು ಸಲ್ಲಿಸಲು ಅದೇಶಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ, ಕೇರಳ, ಉತ್ತರ ಪ್ರದೇಶ, ಆಸ್ಸಾಂ, ಓಡಿಸ್ಸಾ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ನಿರ್ದಿಷ್ಟಗೊಳಿಸಿದ ಅವಧಿಯಲ್ಲಿ ಮಾಹಿತಿಯೊಂದಿಗೆ ಪ್ರಮಾಣಪತ್ರ ಸಲ್ಲಿಸದೇ ಇರುವುದರಿಂದ ಸದ್ರಿ ರಾಜ್ಯಗಳಿಗೆ ದಂಡದೊಂದಿಗೆ ಮಾಹಿತಿಯ ಪ್ರಮಾಣಪತ್ರ ಸಲ್ಲಿಸಲು ಕಾಲಾವಕಾಶ ನೀಡಿ ಎಪ್ರಿಲ್ 2018 ರಂದು ಆದೇಶ ನೀಡಿದೆ. ಅಲ್ಲದೇ ಸರ್ವೋಚ್ಛ ನ್ಯಾಯಾಲಯದ ಬೇಸಿಗೆ ರಜೆ ನಂತರ ಸದರಿ ರಿಟ್ ಅರ್ಜಿ ಮುಂದಿನ ವಿಚಾರಣೆ ಜರುಗಿ ತಿರಸ್ಕೃತಗೊಂಡಿರುವ ಅರಣ್ಯ ಹಕ್ಕು ಅರ್ಜಿ ಒಕ್ಕಲೆಬ್ಬಿಸುವ ಕುರಿತು ಮುಂದುವರೆದ ವಿಚಾರಣೆ ಜರುಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ