ಬಿನ್ನಿಪೇಟೆ ವಾರ್ಡ್ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆ ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ಜಯ

 

ಬೆಂಗಳೂರು, ಜೂ.20- ಗುರು-ಶಿಷ್ಯರ ನಡುವಿನ ಫೈಟ್ ಎಂದೇ ಬಿಂಬಿತವಾಗಿದ್ದ ಬಿನ್ನಿಪೇಟೆ ವಾರ್ಡ್ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆ ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ನಾಗರಾಜ್ ಜಯ ಗಳಿಸಿದ್ದಾರೆ.
ಗೃಹ ವಿಜ್ಞಾನ ಕಾಲೇಜಿನಲ್ಲಿ ನಡೆದ ಆರು ಸುತ್ತು ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡ ಐಶ್ವರ್ಯ ನಾಗರಾಜ್ ಅವರು 7188 ಮತ ಪಡೆಯುವ ಮೂಲಕ ವಿಜಯದ ನಗೆ ಬೀರಿದರು.

ಐಶ್ವರ್ಯ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ವಿದ್ಯಾ ಶಶಿಕುಮಾರ್ (5249) ಅವರಿಗಿಂತ 1939 ಹೆಚ್ಚು ಮತ ಗಳಿಸುವ ಮೂಲಕ ಗೆಲುವು ಸಾಧಿಸಿದರೆ, ಬಿಜೆಪಿ ಅಭ್ಯರ್ಥಿ ಚಾಮುಂಡೇಶ್ವರಿ ಕೇವಲ 2455 ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಈ ಮಧ್ಯೆ ನೋಟಾಗೆ 159 ಮತಗಳು ಬಿದ್ದಿವೆ.
ತಿರುಪತಿ ಪ್ರವಾಸದ ವೇಳೆ ಹೃದಯಾಘಾತದಿಂದ ಬಿಬಿಎಂಪಿ ಸದಸ್ಯೆ ಮಹದೇವಮ್ಮ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಬಿನ್ನಿಪೇಟೆ ವಾರ್ಡ್‍ಗೆ ಉಪಚುನಾವಣೆ ನಡೆದಿತ್ತು.

ಮಹದೇವಮ್ಮ ಅವರ ಪತಿ ಬಿಟಿಎಸ್ ನಾಗರಾಜ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಬಲಗೈ ಭಂಟರಂತಿದ್ದರು. ಆದರೂ ಮಹದೇವಮ್ಮ ಅವರ ನಿಧನದಿಂದ ತೆರವಾಗಿದ್ದ ಬಿನ್ನಿಪೇಟೆ ವಾರ್ಡ್‍ಗೆ ಅವರ ಪುತ್ರಿ ಐಶ್ವರ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ದಕ್ಕಿರಲಿಲ್ಲ.
ಹೀಗಾಗಿ ದಿನೇಶ್ ಗುಂಡೂರಾವ್ ವಿರುದ್ಧ ಸಿಡಿದೆದ್ದ ಬಿಟಿಎಸ್ ನಾಗರಾಜ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡು ತಮ್ಮ ಪುತ್ರಿಯನ್ನು ಅದೇ ಪಕ್ಷದಿಂದ ಅಭ್ಯರ್ಥಿಯನ್ನಾಗಿಸಿದ್ದರು.
ತನ್ನ ವಿರುದ್ಧವೇ ತಿರುಗಿಬಿದ್ದ ಶಿಷ್ಯನಿಗೆ ತಕ್ಕ ಪಾಠ ಕಲಿಸಬೇಕೆಂಬ ಹಠಕ್ಕೆ ಬಿದ್ದ ದಿನೇಶ್ ಗುಂಡೂರಾವ್ ಅವರು ಬಿಬಿಎಂಪಿ ಮಾಜಿ ಸದಸ್ಯೆ ವಿದ್ಯಾ ಶಶಿಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿ ಗೆಲುವಿಗಾಗಿ ರಣತಂತ್ರ ರೂಪಿಸಿದ್ದರು.

ಗುರುವಿನ ಈ ತಂತ್ರ ಅರಿತ ನಾಗರಾಜ್ ಅವರು ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ತಮ್ಮ ಪುತ್ರಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲ ಜಯ: ಬಿಬಿಎಂಪಿಯಲ್ಲಿ ಜೆಡಿಎಸ್ ಪಕ್ಷ ಪ್ರಬಲವಾಗಿಲ್ಲ. 198 ಕ್ಷೇತ್ರಗಳಲ್ಲಿ ಕೇವಲ 14 ಮಂದಿ ಸದಸ್ಯರು ಮಾತ್ರ ಗೆದ್ದಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಬಿಎಂಪಿಯಲ್ಲಿರುವಂತೆ ಸರ್ಕಾರದಲ್ಲೂ ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ಮೈತ್ರಿ ಏರ್ಪಟ್ಟು ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಎಚ್‍ಡಿಕೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಬಿಬಿಎಂಪಿಗೆ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ವಾರ್ಡ್‍ನಲ್ಲಿ ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ನಾಗರಾಜ್ ಅವರು ಗೆಲುವು ಸಾಧಿಸುವ ಮೂಲಕ ಪಕ್ಷದ ಬಲವರ್ಧನೆಗೆ ಮುನ್ನುಡಿ ಬರೆದಿದ್ದಾರೆ.
ತೊಡರುಗಾಲಾಗುವುದೆ..? ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಅವರಿಗೆ ಅಧ್ಯಕ್ಷ ಸ್ಥಾನ ದೊರೆಯುವ ಮೊದಲೇ ಎದುರಾದ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿನ್ನಿಪೇಟೆ ವಾರ್ಡ್‍ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಅವರು ಸೋಲನುಭವಿಸಿರುವುದು ದಿನೇಶ್ ಗುಂಡೂರಾವ್ ಅವರ ಸೋಲು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ತಮ್ಮ ಶಿಷ್ಯನ ವಿರುದ್ಧವೇ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗದ ದಿನೇಶ್ ಗುಂಡೂರಾವ್ ಅವರಿಗೆ ಈ ಸೋಲು ತೊಡರುಗಾಲಾಗುವುದೇ ಕಾದು ನೋಡಬೇಕಿದೆ.
ಕಾರ್ಯಕರ್ತರ ಸಂಭ್ರಮ: ಕಳೆದ 18ರಂದು ಬಿನ್ನಿಪೇಟೆ ವಾರ್ಡ್‍ನಲ್ಲಿ ನಡೆದ ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿತ್ತು. ಹೀಗಾಗಿ ಮತದಾರರು ಮತದಾನ ಮಾಡಲು ಉತ್ಸಾಹ ತೋರದ ಪರಿಣಾಮ ಕೇವಲ ಶೇ.43ರಷ್ಟು ಮಾತ್ರ ಮತದಾನವಾಗಿತ್ತು.
ಹೀಗಾಗಿ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ ಎಂದು ಊಹಿಸಲು ಅಸಾಧ್ಯವಾಗಿತ್ತು. ಆದರೆ, ಇಂದು ಫಲಿತಾಂಶ ಪ್ರಕಟವಾಗಿ ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ನಾಗರಾಜ್ ಗೆಲುವು ಸಾಧಿಸುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಇಡೀ ವಾರ್ಡ್‍ನಾದ್ಯಂತ ಕುಣಿದು ಕುಪ್ಪಳಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ