ಚಿತ್ರದುರ್ಗ, ಜೂ.19- ಮುಖ್ಯಮಂತ್ರಿಯಾದ 24 ಗಂಟೆಯೊಳಗೆ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಅವರು ಒಂದು ತಿಂಗಳು ಕಳೆದರೂ ರೈತರ ಸಾಲ ಮನ್ನಾ ಮಾಡಿಲ್ಲ. ಕೂಡಲೇ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾ ಕಚೇರಿ ಬಳಿ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಮನವಿ ನೀಡಿದರು.
ಇದೇ ವೇಳೆ ರೈತ ಮುಖಂಡ ಕೆ.ಪಿ.ಮಾತನಾಡಿ ಕಳೆದ 15 ವರ್ಷಗಳಿಂದಲೂ ಜಿಲ್ಲೆಯಲ್ಲಿ ರೈತರು ಸತತವಾಗಿ ಬರಗಾಲಕ್ಕೆ ತುತ್ತಾಗಿದ್ದಾರೆ. ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಸಾಲ ಮನ್ನಾ ಘೋಷಣೆ ಮಾಡಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡುವ ಮೂಲಕ, ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು
ರೈತರು ಪಾವತಿಸಿದ ಬೆಳೆ ವಿಮೆ ಹಣ ಸಹ ಇನ್ನೂ ನೀಡಿಲ್ಲ. ಸರ್ಕಾರಕ್ಕಿಂತಲೂ ಅಪಾಯಕಾರಿಯಾಗಿರುವ ವಿಮಾ ಕಂಪೆನಿಗಳು ರೈತರನ್ನು ಸುಲಿಗೆ ಮಾಡುತ್ತಿವೆ. ಕೂಡಲೇ ವಿಮಾ ಕಂಪೆನಿಗಳು ರೈತರ ಖಾತೆಗಳಿಗೆ ಬೆಳೆ ವಿಮಾ ಹಣವನ್ನು ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಸಿರು ಸೇನೆ ಜಿಲ್ಲಾಧ್ಯಕ್ಷ ನುಲೇನೂರು ಶಂಕರಪ್ಪ, ಬಸ್ತಿಹಳ್ಳಿ ಸುರೇಶ್ ಬಾಬು, ಧನಂಜಯ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ದಯಾನಂದ ಮೂರ್ತಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.