
ನವದೆಹಲಿ, ಜೂ.19-ಲೆಫ್ಟಿನೆಂಟ್ ಗೌರ್ನರ್ ಕಾರ್ಯಾಲಯದ ಒಳಗೆ ಧರಣಿ ಮುಂದುವರೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಪ್ರತಿಭಟನೆ ಅಸಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ತ್ವರಿತ ವಿಚಾರಣೆ ನಡೆಸಲು ಸುಪ್ರಿಂಕೋರ್ಟ್ ಇಂದು ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಎಸ್.ಎ.ನಜೀರ್ ಮತ್ತು ಇಂದು ಮಲ್ಹೋತ್ರಾ ಅವರನ್ನೊಳಗೊಂಡ ರಜೆ ಕಾಲದ ಪೀಠ ಈ ಪ್ರಕರಣದ ವಿಚಾರಣೆಯನ್ನು ರಜೆ ನಂತರ ಕೈಗೊಳ್ಳುವುದಾಗಿ ತಿಳಿಸಿತು. ಸಭೆಗೆ ಐಎಎಸ್ ಅಧಿಕಾರಿಗಳ ಮನವಿ:
ದೆಹಲಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಮುಖ್ಯಮಂತ್ರಿ ಸಭೆ ಕರೆಯುವುದನ್ನು ತಾವು ನಿರೀಕ್ಷಿಸುತ್ತಿದ್ದೇವೆ ಎಂದು ಐಎಎಸ್ ಅಧಿಕಾರಿಗಳು ಹೇಳಿದ್ದಾರೆ. ಸರ್ಕಾರದ ಮುಖ್ಯಕಾರ್ಯದರ್ಶಿ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಎಎಪಿ ಸರ್ಕಾರ ಮತ್ತು ಐಎಎಸ್ ಅಧಿಕಾರಿಗಳ ನಡುವೆ ಬಿಕ್ಕಟ್ಟು ಉಲ್ಭಣಗೊಂಡಿದೆ. ಈ ಮಧ್ಯೆ ಧರಣಿ ಮತ್ತು ಉಪವಾಸ ಮುಂದುವರೆಸಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅಸ್ವಸ್ಥರಾಗಿದ್ದು, ಇಂದು ಬೆಳಗ್ಗೆ ಚೇತರಿಸಿಕೊಂಡಿದ್ದಾರೆ.