ನವದೆಹಲಿ:ಜೂ-19: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾರ್ ಅವರ ಕಚೇರಿಯಲ್ಲಿ ನಡೆಸುತ್ತಿದ್ದ ಧರಣಿ ವಿರುದ್ಧ ದಾಖಲಾಗಿದ್ದ ಅರ್ಜಿಯನ್ನು ತುರ್ತು ಪರಿಶೀಲನೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಕೇಜ್ರಿವಾಲ್ ಧರಣಿ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ತುರ್ತು ಪರಿಶೀಲನೆ ನಡೆಸಲು ನಿರಾಕರಿಸಿರುವ ಸುಪ್ರೀಂಕೋರ್ಟ್, ಕೇಜ್ರಿವಾಲ್ ಹಾಗೂ ಅವರ ಸಂಪುಟದ ಮುಖಂಡರು ನಡೆಸುತ್ತಿರುವ ಧರಣಿ ಅಸಾಂವಿಧಾನಿಕವಾದದ್ದು ಎಂದು ಹೇಳಿದೆ. ಅಲ್ಲದೆ, ಈ ಕುರಿತ ಅರ್ಜಿಯನ್ನು ಬೇಸಿಗೆ ರಜೆ ಬಳಿಕ ಪರಿಶೀಲನೆ ನಡೆಸುವುದಾಗಿ ತಿಳಿಸಿದೆ.
ಐಎಎಸ್ ಅಧಿಕಾರಿಗಳು ಕರ್ತವ್ಯಕ್ಕೆ ಮರಳಬೇಕು ಎಂದು ಆಗ್ರಹಿಸಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಹಾಗೂ ಅವರ ಮಂತ್ರಿಮಂಡಲದ ಸದ್ಯರು ನಡೆಸುತ್ತಿರುವ ಮುಷ್ಕರ 9ನೇ ದಿನಕ್ಕೆ ಕಾಲಿಟ್ಟಿದೆ.
3 ತಿಂಗಳಿನಿಂದ ಪರೋಕ್ಷ ಮುಷ್ಕರ ನಡೆಸುತ್ತಿರುವ ಐಎಎಸ್ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಬೇಕು ಹಾಗೂ ನಾಗರೀಕರ ಮನೆ ಬಾಗಿಲಿಗೇ ಪಡಿತರ ವಿತರಿಸುವ ಕಾರ್ಯ ಆರಂಭಿಸಬೇಕು ಎಂದು ಕೇಜ್ರಿವಾಲ್ ಹಾಗೂ ಅವರ ಸಂಪುಟದ ಸದಸ್ಯರು ಜೂ.13 ರಂದು ಉಪ ರಾಜ್ಯಪಾಲರ ಕಚೇರಿಯ ಸೋಫಾದಲ್ಲಿ ಕುಳಿತು ಧರಣಿ ಆರಂಭಿಸಿದ್ದರು. ಆಂದಿನಿಂದಲೂ ಅವರು ಕದಲಿಲ್ಲ.
ಈ ನಡುವೆ ಭಾನುವಾರಷ್ಟೇ ಐಎಎಸ್ ಅಧಿಕಾರಿಗಳಿಗೆ ಟ್ವಿಟರ್ ಮೂಲಕ ಮನವಿ ಮಾಡಿಕೊಂಡಿದ್ದ ಕೇಜ್ರಿವಾಲ್ ಅವರು, ಅಧಿಕಾರಿಗಳು ನನ್ನ ಕುಟುಂಬವಿದ್ದಂತೆ. ಸಚಿವರ ಜೊತೆಗಿನ ಸಭೆಗಳಲ್ಲಿ ಅವರ ಸುರಕ್ಷತೆ ಹಾಗೂ ಭದ್ರತೆ ಕುರಿತು ಬಹಿರಂಗ ಆಶ್ವಾಸನೆ ನೀಡುತ್ತೇನೆ. ಅಧಿಕಾರಿಗಳು ಕರ್ತವ್ಯಕ್ಕೆ ಬಹಿಷ್ಕಾರ ಸ್ಥಗಿತಗೊಳಿಸಿ ಸೇವೆಗೆ ಮರಳಬೇಕು ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಐಎಎಸ್ ಅಧಿಕಾರಿಗಳ ಸಂಘ, ಮುಖ್ಯಮಂತ್ರಿಗಳ ಮನವಿಯನ್ನು ಸ್ವಾಗತಿಸುತ್ತೇವೆ. ನಮ್ಮ ಭದ್ರತೆ ಹಾಗೂ ಗೌರವದ ಕುರಿತು ಸೂಕ್ತ ಭರವಸೆಗಳನ್ನು ನಿರೀಕ್ಷಿಸುತ್ತಿದ್ದೇವೆ. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆಗೆ ಸಿದ್ಧ ಎಂದು ಹೇಳಿದೆ.
AAP-LG standoff in Delhi, No urgent hearing on plea,says Supreme Court