ಮೆಕ್ಸಿಕೊ ಸಿಟಿ, ಜೂ.18-ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ರೋಚಕ ಹಣಾಹಣೆಯಲ್ಲಿ ಚಾಂಪಿಯನ್ ಜರ್ಮನಿ ತಂಡವನ್ನು ಮೆಕ್ಸಿಕೋ ಸೋಲಿಸಿದ ಬಳಿಕ ತಾಯ್ನಾಡಿನಲ್ಲಿ ಸಂಭ್ರಮೋಲ್ಲಾಸ ಮುಗಿಲು ಮುಟ್ಟಿದೆ.
ವಿಶ್ವದ ನಂ.1 ಚಾಂಪಿಯನ್ ಜರ್ಮನಿಯನ್ನು ಮೆಕ್ಸಿಕೋ 1-0 ಗೋಲಿನಿಂದ ಮಣಿಸಿದ ನಂತರ ರಾಜಧಾನಿ ಮೆಕ್ಸಿಕೋ ಸಿಟಿ ಸೇರಿದಂತೆ ದೇಶಾದ್ಯಂತ ಕ್ರೀಡಾಭಿಮಾನಿಗಳು ವಿಜಯೋತ್ಸವ ಆಚರಿಸಿದರು.
35ನೇ ನಿಮಿಷದಲ್ಲಿ 22ರ ಹರೆಯದ ಲೊಝಾನೊ ಹಿರ್ವಿಂಗ್ ಗೋಲು ಬಾರಿಸಿದಾಗ ಮೆಕ್ಸಿಕೋ ಸಿಟಿಯಲ್ಲಿ ಜನರು ಏಕಕಾಲಕ್ಕೆ ಕುಣಿದು ಕುಪ್ಪಳಿಸಿದ ರಭಸಕ್ಕೆ ಸಣ್ಣ ಪ್ರಮಾಣದ ಕೃತಕ ಭೂಕಂಪವಾಯಿತು ಎಂದು ಸರ್ಕಾರ ತಿಳಿಸಿದೆ.
ಐತಿಹಾಸಿಕ ಗೆಲವು : ಮಾಸ್ಕೋದಲ್ಲಿ ನಿನ್ನೆ ತಡರಾತ್ರಿ ನಡೆದ 2018ರ ವಿಶ್ವಕಪ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಜರ್ಮನಿ ಮೆಕ್ಸಿಕೊ ವಿರುದ್ಧ ಸೋತು ಭಾರೀ ಮುಖಭಂಗ ಅನುಭವಿಸಿದೆ.
ಪಂದ್ಯಾವಳಿಯ ಎಫ್ ಗುಂಪಿನಲ್ಲಿ ನಡೆದ ಈ ಎರಡು ತಂಡಗಳ ಹೈವೋಲ್ಟೇಜ್ ಪಂದ್ಯದಲ್ಲಿ ಮೆಕ್ಸಿಕೋ1-0 ಗೋಲಿನಿಂದ ಗೆಲುವು ಸಾಧಿಸಿತು. ಈ ವಿಜಯದೊಂದಿಗೆ ಮೆಕ್ಸಿಕೊ ಶುಭಾರಂಭ ಮಾಡಿದೆ.
ಪ್ರತಿಭಾವಂತ ಆಟಗಾರ ಹಿರ್ವಿಂಗ್ 35ನೇ ನಿಮಿಷದಲ್ಲಿ ಗೋಲು ಸಿಡಿಸಿದ್ದು ಮೆಕ್ಸಿಕೊ ತಂಡದ ಗೆಲುವಿಗೆ ಕಾರಣವಾಯಿತು. ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಜರ್ಮನಿ ವಿರುದ್ಧ ಮೆಕ್ಸಿಕೊ ತಂಡದ ಎರಡನೇ ಗೆಲುವು ಇದಾಗಿದೆ. 1982ರ ವಿಶ್ವಕಪ್ ಪಂದ್ಯವೊಂದರಲ್ಲಿ ಮೆಕ್ಸಿಕೋ ಜರ್ಮನಿ ವಿರುದ್ಧ ಜಯ ಸಾಧಿಸಿತ್ತು.