ಕಜಾನ್, ಜೂ.18-ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವಿಡಿಯೋ ಅಸಿಸ್ಟಂಟ್ ರೆಫರಿ ಸಿಸ್ಟಂ(ದೃಶ್ಯ ಆಧಾರಿತ ನೆರವಿನ ತೀರ್ಪು ಪದ್ದತಿ-ವಿಎಆರ್) ಬಳಸಿದ ಪಂದ್ಯಕ್ಕೆ ರಷ್ಯಾದ ಕಜಾನ್ ಕ್ರೀಡಾಂಗಣ ಸಾಕ್ಷಿಯಾಯಿತು. ಕ್ರಿಕೆಟ್ನಲ್ಲಿ ಈಗಾಗಲೇ ಜಾರಿಯಲ್ಲಿರುವ ಅಂಪೈರ್ ತೀರ್ಪು ಮರು ಪರಿಶೀಲನಾ ಪದ್ಧತಿ(ಯುಡಿಆರ್ಎಸ್) ಮಾದರಿಯಲ್ಲಿ ವಿಎಆರ್ನನ್ನು ಉಪಯೋಗಿಸಲಾಗಿದೆ.
ಶನಿವಾರ ನಡೆದ ಗ್ರೂಪ್ ಸಿ ವಿಭಾಗದ ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ತಂಡಗಳ ನಡುವಣ ಪಂದ್ಯದಲ್ಲಿ ಈ ವ್ಯವಸ್ಥೆಯನ್ನು ಮೊಟ್ಟ ಮೊದಲ ಬಾರಿ ಬಳಸಲಾಗಿದೆ. ವಿಎಆರ್ ಸಿಸ್ಟಂ ನೆರವು ಪಡೆದು ಮೊದಲ ಗೋಲು ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಫ್ರಾನ್ಸ್ನ ಆಂಟೋಯ್ಸ್ ಗ್ರಿಜ್ಮನ್ ಪಾತ್ರರಾಗಿದ್ದಾರೆ.
ಪಂದ್ಯದ ದ್ವಿತೀಯಾರ್ಧದಲ್ಲಿ ಪೆನಾಲ್ಟಿ ಬಾಕ್ಸ್ ಒಳಗೆ ಆಂಟೋಯ್ಸ್ ಅವರನ್ನು ಎದುರಾಳಿ ತಂಡದ ಆಟಗಾರ ಕೆಳಗೆ ಬೀಳಿಸಿದ್ದರು. ತಂಡದ ಮನವಿಗೆ ಸ್ಪಂದಿಸಿದ ರೆಫರಿ ಫೆನಾಲ್ಟಿ ಕಿಕ್ಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಫ್ರಾನ್ಸ್ ಆಟಗಾರರು ವಿಡಿಯೋ ಅಸಿಸ್ಟಂಟ್ ರೆಫರಿ ಸಿಸ್ಟಂ ಮೊರೆ ಹೋದರು. ಬಳಿಕ ಫ್ರಾನ್ಸ್ ಪರ ತೀರ್ಪು ಬಂದಾಗ ಪೆನಾಲ್ಟಿ ಕಿಕ್ಗೆ ಅವಕಾಶ ನೀಡಲಾಯಿತು. ಆಗ ಆಂಟೋಯ್ಸ್ ಗೋಲು ಗಳಿಸಿದರು.
ಫಿಫಾ ವಿಶ್ವಕಪ್ನ ಮುಂದಿನ ಪಂದ್ಯಗಳಲ್ಲೂ ದೃಶ್ಯ ಆಧಾರಿತ ನೆರವಿನ ತೀರ್ಪು ವ್ಯವಸ್ಥೆ ಮುಂದುವರಿಯಲಿದೆ.