
ಚಂಡಿಗಢ, ಜೂ.18-ದೇಶದ ಹಲವೆಡೆ ಬೀದಿ ನಾಯಿಗಳಿಂದ ನರಬಲಿ ಪ್ರಕರಣಗಳು ಮುಂದುವರಿದಿದ್ದು, ಪಂಜಾಬ್‍ನ ಚಂಡಿಗಢದ ಉದ್ಯಾನವೊಂದರಲ್ಲಿ ಒಂದೂವರೆ ವರ್ಷದ ಅಂಬೆಗಾಲಿನ ಮಗುವೊಂದನ್ನು ಶ್ವಾನಗಳ ಹಿಂಡು ಕಚ್ಚಿ ಕೊಂದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಮನೆಗೆಲಸ ಮಾಡುತ್ತಿರುವ ಮಹಿಳೆಯೊಬ್ಬಳು ತನ್ನ ನಾಲ್ಕು ಮಕ್ಕಳನ್ನು ಹತ್ತಿರದ ಉದ್ಯಾನವನವೊಂದರಲ್ಲಿ ಬಿಟ್ಟು, ಪಾತ್ರೆ ತೊಳೆಯಲು ಮನೆಯೊಂದಕ್ಕೆ ಹೋಗಿದ್ದಳು. ಇತ್ತ ಇತರ ಮೂರು ಮಕ್ಕಳೊಂದಿಗೆ ಪಾರ್ಕಿನಲ್ಲಿ ಆಟವಾಡುತ್ತಿದ್ದ ಆಯುಷ್ ಎಂಬ ಮಗುವಿನ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದವು. ಅಂಬೆಗಾಲಿಡುತ್ತಿದ್ದ ಈ ಮಗುವನ್ನು ಸುತ್ತುವರಿದ ಶ್ವಾನಗಳು ಕಚ್ಚಿ ಎಳೆದಾಡಿ ಕೊಂದು ಹಾಕಿದವು. ಈ ದೃಶ್ಯದಿಂದ ಬೆದರಿದ ಇತರ ಮೂರು ಮಕ್ಕಳು ಅಲ್ಲಿಂದ ಓಡಿಹೋದರು. ಮಗುವನ್ನು ಸರ್ಕಾರಿ ಆಸ್ಪತ್ರೆಗೆ ತಕ್ಷಣ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯ ಆಯುಷ್ ಎಂಬ ಮಗುವಿನ ಆಯಸ್ಸು ಮುಗಿದಿತ್ತು. ಚಂಡಿಗಢದ ದಕ್ಷಿಣ ಭಾಗದಲ್ಲಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ದಾಳಿಗಳ ಅನೇಕ ಪ್ರಕರಣಗಳು ವರದಿಯಾಗಿದೆ.