ಬೆಂಗಳೂರು:ಜೂ-18: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಶ್ರೀರಾಮ ಸೇನೆಗೂ ಯಾವುದೇ ಸಂಬಂಧ ಇಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿ ಹಮ್ಮಿಕೊಂಡಿದ್ದ ಎಡಪಂಥೀಯರ ಹಿಂದೂ ವಿರೋಧಿ ಷಡ್ಯಂತರ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗೋವಿಂದ್ ಪಾನ್ಸರೆ, ನರೇಂದ್ರ ದಾಭೋಲ್ಕರ್, ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಯಾದಾಗ ಕಾಂಗ್ರೆಸ್ ಸರ್ಕಾರವೇ ಇತ್ತು. ಬುದ್ಧಿಜೀವಿಗಳು ಅವರನ್ನು ಕೇಳುವುದು ಬಿಟ್ಟು, ಮೋದಿ ಮಾತನಾಡುತ್ತಿಲ್ಲ ಎಂದು ಅರಚುತ್ತಿದ್ದಾರೆ. ಕರ್ನಾಟಕದಲ್ಲಿ ನಾಯಿ ಸತ್ತರೆ ಅದಕ್ಕೆ ಮೋದಿ ಉತ್ತರ ಕೊಡಬೇಕೆ ಎಂದು ಪ್ರಶ್ನಿಸಿದರು.
ಕಲಬುರ್ಗಿ ಹಾಗೂ ಗೌರಿ ಅವರೊಂದಿಗೆ ವೈಚಾರಿಕವಾಗಿ ನಮ್ಮ ವಿರೋಧವಿದೆಯೇ ಹೊರತು, ನಾವು ಕೊಲೆಗಡುಕರಲ್ಲ, ಹಿಂಸೆಯಲ್ಲಿ ನಂಬಿಕೆ ಇಟ್ಟವರಲ್ಲ. ಆರಂಭದಿಂದಲೇ ಗೌರಿ ಹತ್ಯೆ ತನಿಖೆ ದಿಕ್ಕು ತಪ್ಪಿಸಲಾಗುತ್ತಿದೆ. ಬುದ್ಧಿಜೀವಿಗಳ ಟಾರ್ಗೆಟ್ ಹಿಂದೂ ಸಂಘಟನೆಗಳೇ ಆಗಿವೆ ಎಂದು ಆರೋಪಿಸಿದರು.
ಪೊಲೀಸರ ಬಗ್ಗೆ ನನಗೆ ಅಭಿಮಾನವಿದೆ. ಆದರೆ, ಅವರ ಹಿಂದೆ ನಿಂತು ಆಡಿಸುತ್ತಿರುವ ಕಾಂಗ್ರೆಸ್ ಹಾಗೂ ಬುದ್ಧಿಜೀವಿಗಳು ಅಪಾಯಕಾರಿ. ಹತ್ಯೆ ಮಾಡಲು ಗುಂಡು ಪಡೆದವನನ್ನು ಬಂಧಿಸಿ ವಿಚಾರಿಸುತ್ತೀರಿ. ಆದರೆ, ಗುಂಡು ಕೊಟ್ಟವನನ್ನು ಬಿಟ್ಟು ಬಿಡುತ್ತೀರಿ. ಇದು ಯಾವ ಸೀಮೆ ನ್ಯಾಯ ಎಂದು ಪ್ರಶ್ನಿಸಿದರು.
ಇನ್ನು ಗೌರಿ ಹತ್ಯೆ ಪ್ರಕರಣದಲ್ಲಿ ಮುತಾಲಿಕ್ ‘ಹೆಡ್ ಆಫೀಸ್’. ಮೊದಲು ಅವರನ್ನು ಬಂಧಿಸಿ’ ಎಂದು ವಿಧಾನ ಪರಿಷತ್ ಸದಸ್ಯ ಸದ್ಸಯಸಿ.ಎಂ. ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ‘ಆ ಕುರಿತು ದಾಖಲೆಗಳಿದ್ದರೆ ಅವರು ಸಿಐಡಿಗೆ ನೀಡಲಿ, ಅದನ್ನು ಬಿಟ್ಟು ಸುಮ್ಮನೆ ಬೊಗಳಬೇಡಿ. ನಾನೂ ನಿಮ್ಮನ್ನು ಐಎಸ್ಐ ಏಜೆಂಟ್ ಎಂದು ಕರೆದರೆ ಸುಮ್ಮನಿರುತ್ತೀರಾ’ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಪರಶುರಾಮ ವಾಘ್ಮೋರೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುತಾಲಿಕ್, ‘ವಾಘ್ಮೋರೆ ನನ್ನೊಂದಿಗೆ ಛಾಯಚಿತ್ರ ತೆಗೆಸಿಕೊಂಡಿರಬಹುದು. ದಿನಕ್ಕೆ ನೂರಾರು ಮಂದಿ ಹಾಗೆ ಛಾಯಚಿತ್ರ ತೆಗೆಸಿಕೊಳ್ಳುತ್ತಾರೆ. ವಾಘ್ಮೋರೆ ಶ್ರೀರಾಮ ಸೇನೆ ಸದಸ್ಯ ಅಲ್ಲ. ಆದರೆ, ಅವರು ಹಿಂದೂ ಅಭಿಮಾನಿ’ ಎಂದು ಹೇಳಿದರು.
ಇದೇವೇಳೆ ಹಿಂದೂ ಜನಜಾಗೃತಿ ಸಮಿತಿಯ ಮೋಹನ್ಗೌಡ, ಈ ಹತ್ಯೆ ಪ್ರಕರಣದಲ್ಲಿ ನನ್ನ ಹೆಸರೂ ಕೇಳಿ ಬಂದಿದೆ. ಪೊಲೀಸರು ನನಗೆ ಮಂಪರು ಪರೀಕ್ಷೆ ಮಾಡಲಿ. ಆದರೆ, ಒಂದು ಷರತ್ತು ಇದೆ. ರೋಹಿತ್ ಚಕ್ರತೀರ್ಥ ಹತ್ಯೆಗೆ ಸುಪಾರಿಕೊಟ್ಟ ವಿಚಾರದಲ್ಲಿ ಹೆಸರು ಕೇಳಿಬಂದಿದ್ದ ದಿನೇಶ್ ಅಮಿನ್ಮಟ್ಟು ಹಾಗೂ ನಗರದ ನಕ್ಸಲ್ ಜಿಗ್ನೇಶ್ ಮೇವಾನಿ ಅವರನ್ನೂ ಪರೀಕ್ಷೆಗೆ ಒಳಪಡಿಸಬೇಕು ಎಂದು ಸವಾಲು ಹಾಕಿದರು.
Should PM React If Dog Dies?,Pramod Muthalik, On Gauri Lankesh Killing