
ಅಥೆನ್ಸ್, ಜೂ.18-ಭಾರತವು 2025ರ ವೇಳೆಗೆ ಐದು ಲಕ್ಷ ಕೋಟಿ ಡಾಲರ್ಗಳ ಆರ್ಥಿಕತೆ ಹೊಂದಲು ಉತ್ಸುಕವಾಗಿದ್ದು, ಅದೇ ಅವಧಿಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ಗ್ರಾಹಕರ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆಯಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದ್ದಾರೆ. ತ್ರಿರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಗ್ರೀಸ್ ರಾಜಧಾನಿ ಅಥೆನ್ಸ್ನಲ್ಲಿ ಭಾರತೀಯ ಮೂಲದ ಉದ್ಯಮಿಗಳ ಸಮುದಾಯ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಭಾರತದಲ್ಲಿ ಬಂಡವಾಳ ಹೂಡಿಕೆಗಳಿಗೆ ಇರುವ ಹೇರಳ ಅವಕಾಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಯಲ್ಲಿ ಅನಿವಾಸಿ ಭಾರತೀಯರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ ಕೋವಿಂದ್, ತಮ್ಮ ಭೇಟಿಯಿಂದ ಭಾರತ ಮತ್ತು ಗ್ರೀಸ್ ನಡುವಣ ಬಾಂಧವ್ಯ ಬಲವರ್ಧನೆಯಾಗಲಿದೆ ಎಂದರು. 11 ವರ್ಷಗಳ ಬಳಿಕ ಗ್ರೀಸ್ಗೆ ಅಧಿಕೃತವಾಗಿ ಭೇಟಿ ನೀಡಿದ ಭಾರತದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಕೋವಿಂದ್ ಪಾತ್ರರಾಗಿದ್ದಾರೆ.