ಟೋಕಿಯೊ, ಜೂ.18- ಉದಯರವಿ ನಾಡು ಜಪಾನಿನ ಪಶ್ಚಿಮ ಭಾಗದಲ್ಲಿರುವ ಓಸಾಕಾ ನಗರದ ಮೇಲೆ ಇಂದು ಬೆಳಗ್ಗೆ ಬಂದೆರಗಿದ ವಿನಾಶಕಾರಿ ಭೂಕಂಪದಿಂದ ಸಾವು-ನೋವು ಸಂಭವಿಸಿದ್ದು, ಆಸ್ತಿ-ಪಾಸ್ತಿ ನಷ್ಟಗಳ ವರದಿಯಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಒಸಾಕಾ ಮತ್ತು ಇಬಾರಕಿ ನಗರಗಳಲ್ಲಿ ಐವರು ಮೃತಪಟ್ಟು, ಡಜನುಗಟ್ಟಲೆ ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆಯಿಂದಾಗಿ ಕಟ್ಟಡಗಳ ಗೋಡೆಗಳು ಉರುಳಿ ಬಿದ್ದಿದ್ದು, ಕೆಲವೆಡೆ ಅಗ್ನಿ ಆಕಸ್ಮಿಕಗಳು ಸಂಭವಿಸಿದೆ.
ಒಸಾಕಾ ಮುಖಜಭೂಮಿ ಪ್ರದೇಶದ ವಿಪತ್ತು ನಿರ್ವಹಣಾ ಇಲಾಖೆ ಸಾವು-ನೋವು ಸಂಭವಿಸಿರುವುದನ್ನು ದೃಢಪಡಿಸಿದೆ. ಹಯೊಗೊ ಮತು ಕಯೊಟೊ ಪ್ರಸ್ಥಭೂಮಿಗಳಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ಧಾರೆ ಎಂದು ಅಗ್ನಿ ಮತ್ತು ದುರಂತ ನಿರ್ವಹಣಾ ಸಂಸ್ಥೆ ಹೇಳಿದೆ. ಶಾಲೆ ಗೋಡೆ ಕುಸಿತಗಳಿಂದಾಗಿ 9 ವರ್ಷದ ಬಾಲಕಿ ಹಾಗೂ ಇಬ್ಬರು ವೃದ್ಧರು ಪ್ರತ್ಯೇಕ ಪ್ರಕರಣಗಳಲ್ಲಿ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ 8 ಗಂಟೆಯಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಯು ಪ್ರಮಾಣ ರಿಕ್ಟರ್ ಮಾಪಕದಲ್ಲಿ 6.1ರಷ್ಟಿತ್ತು. ಒಸಾಕಾದಲ್ಲಿ 13 ಕಿ.ಮೀ. ಭೂಮಿ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿತ್ತು ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.
ಭೂಕಂಪನದಿಂದಾಗಿ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಜನರು ರಸ್ತೆಗಳಿಗೆ ಓಡಿ ಬಂದರು. ಅನೇಕ ಮನೆಗಳಿಗೆ ಭೂಕಂಪದಿಂದ ಹಾನಿಯಾಗಿವೆ. ಗೋಡೆಗಳು ಹಾಗೂ ಬುಕ್ಶೆಲ್ಫ್ಗಳು ಕುಸಿದಿದ್ದು, ನೆಲದಲ್ಲಿ ಬಿರುಕು ಕಾಣಿಸಿಕೊಂಡಿವೆ. ರಕ್ಷಣಾ ಕಾರ್ಯಕರ್ತರು ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸಂತ್ರಸ್ತರ ನೆರವಿಗೆ ಧಾವಿಸುವಂತೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ. ‘