ನವದೆಹಲಿ, ಜೂ.18-ಸಂಸತ್‍ನಲ್ಲಿ ಚರ್ಚೆಯಾಗುವವರೆಗೂ ರಾಜ್ಯಕ್ಕೆ ಮಾರಕವಾಗಿರುವ ಕಾವೇರಿ ನಿರ್ವಹಣಾ ಮಂಡಳಿ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನವಿ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಂಜೆ ಪ್ರಧಾನಿ ಅವರನ್ನು ಭೇಟಿ ಮಾಡಲಿದ್ದು, ಆ ಸಂದರ್ಭದಲ್ಲಿ ಸಂಸತ್ ಸಭೆಯಲ್ಲಿ ಚರ್ಚಿಸಿ ತೀರ್ಮಾನವಾಗುವ ಮುನ್ನವೇ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಧಿಸೂಚನೆ ಹೊರಡಿಸಿರುವ ವಿಚಾರದ ಬಗ್ಗೆ ಗಮನ ಸೆಳೆಯಲಾಗುವುದು. ಇನ್ನೂ ಕಾವೇರಿ ನಿರ್ವಹಣಾ ಮಂಡಳಿಯ ನಿಯಮಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ಕೊಟ್ಟಿಲ್ಲ. ಅಲ್ಲದೆ, ಕೆಲವು ಲೋಪಗಳು ಅದರಲ್ಲಿವೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ವಿಚಾರದಲ್ಲಿ ರಾಜ್ಯದ ರೈತರಿಗೆ ಮಾರಕವಾಗುವ ರೀತಿಯಲ್ಲಿ ಅವೈಜ್ಞಾನಿಕ ತೀರ್ಮಾನ ಕೈಗೊಂಡಿದೆ. ಇದು ಸರಿಯಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಧಾನಿ ಭೇಟಿಯಾಗುತ್ತಿರುವುದಾಗಿ ತಿಳಿಸಿದರು.
ಅಂತಾರಾಜ್ಯ ನದಿ ವಿವಾದಗಳ ಕಾನೂನಿನ ಪ್ರಕಾರ ಸಂಸತ್‍ನಲ್ಲಿ ಚರ್ಚೆಯಾಗಿ ತೀರ್ಮಾನವಾದ ನಂತರವೇ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಆದರೆ, ಯಾವುದೇ ರೀತಿಯ ಚರ್ಚೆಯಾಗದೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಹೀಗಾಗಿ ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಪ್ರಧಾನಿ ಹಾಗೂ ಜಲಸಂಪನ್ಮೂಲ ಸಚಿವ ನಿತಿನ್‍ಗಡ್ಕರಿ ಅವರನ್ನು ಭೇಟಿ ಮಾಡುತ್ತಿರುವುದಾಗಿ ಹೇಳಿದರು.
ಮಂಡಳಿಯ ಪ್ರಕಾರ ಪ್ರತಿ ತಿಂಗಳ ಹತ್ತು ದಿನಗಳಿಗೊಮ್ಮೆ ಮಂಡಳಿ ಸಭೆ ಸೇರಿ ಜಲಾಶಯದ ನೀರನ್ನು ಅಳತೆ ಮಾಡಿ ತೀರ್ಮಾನ ಕೈಗೊಳ್ಳುವುದು ಅವೈಜ್ಞಾನಿಕ. ನಮ್ಮ ರಾಜ್ಯದ ರೈತರು ಯಾವ ಬೆಳೆ ಬೆಳೆಯಬೇಕು ಎಂಬುದನ್ನು ಮಂಡಳಿ ನಿರ್ದೇಶನ ಕೊಡುವುದು ಸರಿಯಲ್ಲ. ನಮ್ಮ ಜಲಾಶಯದ ನೀರನ್ನು ಕೆಳಭಾಗದ ರಾಜ್ಯಗಳಿಗೆ ನೀಡುತ್ತೇವೆ. ಆದರೆ, ಆ ರಾಜ್ಯದಲ್ಲಿ ಹೆಚ್ಚು ಮಳೆಯಾಗಿ ಜಲಾಶಯ ತುಂಬಿದ ನಂತರ ಆ ನೀರನ್ನು ಸಮುದ್ರಕ್ಕೆ ಹರಿಸಲಾಗುತ್ತದೆ. ಈ ಬಗ್ಗೆ ಯಾವುದೇ ನಿರ್ಧಾರವಿಲ್ಲ ಎಂದರು.
ನಮ್ಮ ರೈತರು ಯಾವ ಬೆಳೆ ಬೆಳೆಯಬೇಕು ಎಂಬುದನ್ನು ಬೇರೆಯವರು ನಿರ್ಧರಿಸುವುದು ಎಷ್ಟು ಸೂಕ್ತ. ಇಂತಹ ಹಲವು ಲೋಪಗಳು ಮಂಡಳಿಯಲ್ಲಿ ಸೇರಿದ್ದು, ಅವುಗಳನ್ನು ಸರಿಪಡಿಸುವಂತೆ ಮನವರಿಕೆ ಮಾಡಲಾಗುವುದು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‍ಡಿಆರ್‍ಎಫ್) ಅನುದಾನ ಕಡಿಮೆ ಇದ್ದು, ಹೆಚ್ಚಿಗೆ ನೀಡುವಂತೆ ಕೂಡ ಮನವಿ ಮಾಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.