ರೊನಾಲ್ಡೋ ಮೈ ಮೇಲೆ ಟ್ಯಾಟೂ ಯಾಕಿಲ್ಲ ಗೊತ್ತಾ? ಇದನ್ನು ಓದಿ ಫುಟ್ಬಾಲ್ ಹೊರತಾಗಿಯೂ ಆತನಿಗೆ ಫ್ಯಾನ್ ಆಗ್ತೀರಾ!

ಮಾಸ್ಕೋ: ಪೋರ್ಚುಗಲ್ ತಂಡದ ಸ್ಟ್ರೈಕರ್ ಕ್ರಿಸ್ಟಿಯಾನೋ ರೊನಾಲ್ಡೋ ಮೈಮೇಲೆ ಒಂದೇ ಒಂದು ಸಣ್ಣ ಟ್ಯಾಟೂ ಕೂಡ ಇಲ್ಲ.. ಯಾಕೆ ಗೊತ್ತಾ.. ಇದನ್ನು ಓದಿದರೆ ಅಚ್ಚರಿ ಗೊಳ್ಳುತ್ತೀರಿ..
ಕ್ರೀಡಾಪಟುಗಳಿಗೂ ಟ್ಯಾಟೂಗಳಿಗೂ ಅವಿನಾಭಾವ ಸಂಬಂಧ.. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ತಂಡದ ಪೀಟರ್ಸೆನ್, ಬಾಕ್ಸಿಂಗ್ ದಂತಕಥೆ ಮಹಮದ್ ಅಲಿ ಸೇರಿದಂತೆ ವಿಶ್ವಮಾನ್ಯ ಕ್ರೀಡಾಪಟುಗಳು ಟ್ಯಾಟೂಗಳ ದಾಸರಾಗಿದ್ದಾರೆ. ಇನ್ನು ಫುಟ್ಬಾಲ್ ಕ್ರೀಡೆಯಲ್ಲಿಯಂತೂ ಟ್ಯಾಟೂಗಳು ಫುಟ್ಬಾಲ್ ನಷ್ಟೇ ಖ್ಯಾತಿ ಗಳಿಸಿವೆ. ಫುಟ್ಬಾಲ್ ಕ್ಷೇತ್ರದ ಸೂಪರ್ ಸ್ಟಾರ್  ಗಳಾದ ಲಿಯೋನೆಲ್ ಮೆಸ್ಸಿ, ನೇಮರ್ ಸೇರಿದಂತೆ ವಿಶ್ವಖ್ಯಾತ ಆಟಗಾರರು ತಮ್ಮ ಮೈಮೇಲೆ ಒಂದಿಲ್ಲೊಂದು ಟ್ಯಾಟುಗಳನ್ನು ಹಾಕಿಸಿಕೊಂಡಿದ್ದಾರೆ.
ಆದರೆ ಇದಕ್ಕೆ ಅಪವಾದ ಎಂಬಂತೆ ಪೋರ್ಚುಗಲ್ ತಂಡದ ಸ್ಟ್ರೈಕರ್ ಮತ್ತು ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮಾತ್ರ ತಮ್ಮ ಮೈಮೇಲೆ ಒಂದೇ ಒಂದು ಸಣ್ಣ ಟ್ಯಾಟೂ ಕೂಡ ಹಾಕಿಸಿಕೊಂಡಿಲ್ಲ. ಇಷ್ಟಕ್ಕೂ ರೊನಾಲ್ಡೋ ಏಕೆ ಟ್ಯಾಟೂ ಹಾಕಿಸಿಕೊಂಡಿಲ್ಲ ಎಂಬ ವಿಚಾರದ ಹಿಂದೆ ಆತನ ಮಾನವೀಯತೆಯೊಂದರ ಮತ್ತು ಎಲ್ಲರಿಗೂ ಸ್ಪೂರ್ತಿ ನೀಡಬಲ್ಲ ಕಥೆಯಿದೆ.
ನಿಯಮಿತ ರಕ್ತದಾನಿ ಈ ರೊನಾಲ್ಡೋ
ರೊನಾಲ್ಡೋ ಖ್ಯಾತ ಫುಟ್ಬಾಲ್ ತಾರೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಈ ರೊನಾಲ್ಡೋ ನಿಯಮಿತ ರಕ್ತದಾನಿ ಕೂಡ.. ತಾವು ಎಲ್ಲೇ ಇದ್ದರೂ, ಯಾವುದೇ ದೇಶದಲ್ಲಿದ್ದರೂ ಪ್ರತೀ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಾರೆ. 2009ರಲ್ಲಿ ರೊನಾಲ್ಡೋ ಮೊದಲ ಬಾರಿಗೆ ರಕ್ತದಾನ ಮಾಡಿದ್ದರು. ಆ ಬಳಿಕ ರಕ್ತದಾನದ ಮಹತ್ವ ಅರಿತ ಅವರು 2011ರಿಂದ ನಿಯಮಿತವಾಗಿ ರಕ್ತದಾನ ಮಾಡುತ್ತಿದ್ದಾರೆ. ಅವರು ರಕ್ತದಾನದ ಕಾರ್ಯವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದರೆ ಅವರ ಪೋರ್ಚುಗಲ್ ನಿವಾಸದಲ್ಲಿ ರಕ್ತಾದಾನ ಮಾಡುವುದಕ್ಕಾಗಿಯೇ ವಿಶೇಷ ಕೊಠಡಿ ಮೀಸಲಿಟ್ಟು, ಅದರಲ್ಲಿ ಪುಟ್ಟ ಲ್ಯಾಬ್ ಕೂಡ ತೆರೆದಿದ್ದಾರೆ.
ಇಷ್ಟಕ್ಕೂ ರಕ್ತದಾನಕ್ಕೂ ಟ್ಯಾಟೂಗೂ ಏನು ಸಂಬಂಧ?
ವೈದ್ಯರ ಪ್ರಕಾರ ಮೈಮೇಲೆ ಯಾವುದೇ ರೀತಿಯ ಟ್ಯಾಟೂ ಹಾಕಿಸಿಕೊಂಡರೆ ಕನಿಷ್ಠ ಮೂರರಿಂದ ಆರು ತಿಂಗಳ ಕಾಲ ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ ರಕ್ತದಾನ ಮಾಡುವಂತಿಲ್ಲ. ಒಂದು ವೇಳೆ ನಾವು ಹಾಕಿಸಿಕೊಳ್ಳುವ ಟ್ಯಾಟೂ ರಕ್ತನಾಳಗಳ ಮೇಲೆ ಬಿದ್ದರೆ ಆಗ ನಾವು ಕನಿಷ್ಠ ಒಂದು ವರ್ಷಗಳ ಕಾಲ ರಕ್ತದಾನ ಮಾಡುವಂತಿಲ್ಲ. ಇದೇ ಕಾರಣಕ್ಕೆ ರೊನಾಲ್ಡೋ ತಮ್ಮ ಮೈ ಮೇಲೆ ಯಾವುದೇ ರೀತಿಯ ಟ್ಯಾಟೂಗಳನ್ನು ಹಾಕಿಸಿಕೊಂಡಿಲ್ಲವಂತೆ. ರಕ್ತದಾನ ಮಹತ್ವವನ್ನು ಜಗತ್ತಿಗೆ ತಿಳಿಸಬೇಕು ಎಂಬ ಕಾರಣಕ್ಕೆ ತಾವೇ ಖುದ್ಧು ನಿಯಮಿತವಾಗಿ ರಕ್ತದಾನ ಮಾಡುತ್ತಿದ್ದಾರೆ. ತಮ್ಮ ರಕ್ತದಾನಕ್ಕೆ ಟ್ಯಾಟೂ ಅಡ್ಡಿಯಾಗುತ್ತದೆ ಎಂದು ಯಾವುದೇ ರೀತಿಯ ಟ್ಯಾಟೂಗಳನ್ನು ರೊನಾಲ್ಡೋ ಹಾಕಿಸಿಕೊಂಡಿಲ್ಲ. ಇದಲ್ಲದೆ ಟ್ಯಾಟೂ ಹಾಕಿಸಿಕೊಳ್ಳುವಾಗ ಹೆಪಟೈಟಿಸ್ ಬಿ ಎಂಬ ವೈರಾಣುಗಳು ವ್ಯಕ್ತಿಯ ರಕ್ತಸೇರುವ ಅಪಾಯವಿರುತ್ತದೆ. ಅದೇ ರಕ್ತವನ್ನು ರೋಗಿಗೆ ನೀಡದರೆ ಅದರಿಂದ ಆತನಿಗೆ ಉಪಯೋಗಕ್ಕಿಂತ ಅನಾನುಕೂಲವೇ ಹೆಚ್ಚು. ಹೀಗಾಗಿ ರೊನಾಲ್ಡೋ ಟ್ಯಾಟೂಗಳನ್ನು ಹಾಕಿಸಿಕೊಂಡಿಲ್ಲ ಎನ್ನಲಾಗಿದೆ.
ಬರೀ ರಕ್ತದಾನಿಯಷ್ಟೇ ಅಲ್ಲ, ಬೋನ್ ಮ್ಯಾರೋ ದಾನಿ ಕೂಡ
ಇನ್ನು ರೊನಾಲ್ಡೋ ಕೇವಲ ರಕ್ತದಾನಿ ಮಾತ್ರವಲ್ಲ, ಬೋನ್ ಮ್ಯಾರೋ ದಾನಿ ಕೂಡ. ಈ ಹಿಂದೆ ತಮ್ಮದೇ ತಂಡದ ಸಹ ಆಟಗಾರ ಕಾರ್ಲೋಸ್ ಮಾರ್ಟಿನ್ ರ 2 ವರ್ಷದ ಮಗ ಬೋನ್ ಮ್ಯಾರೋ ಸಮಸ್ಯೆಯಿಂದ ಬಳಲುತ್ತಿದ್ದರು. ಬೋನ್ ಮ್ಯಾರೋ ದಾನಿಗಳಿಗಾಗಿ ಕಾರ್ಲೋಸ್ ಮಾರ್ಟಿನ್ ಹರಸಾಹಸಪಟ್ಟಿದ್ದರು. ಆದರೂ ದಾನಿಗಳ ದೊರೆತಿರಲಿಲ್ಲ. ಸ್ವತಃ ರೊನಾಲ್ಡೋ ಕೂಡ ಸುದ್ದಿವಾಹಿನಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬೋಮ್ ಮ್ಯಾರೋ ದಾನಿಗಳಿಗಾಗಿ ಮನವಿ ಮಾಡಿಕೊಂಡರು. ಆದರೆ ದಾನಿಗಳು ದೊರೆಯದ ಕಾರಣ ಖುದ್ಧು ತಾವೇ ದಾನಿಯಾಗಿ ಮುಂದೆ ನಿಂತು ತಮ್ಮ ಬೋನ್ ಮ್ಯಾರೋ ದಾನ ಮಾಡಿ ಸ್ನೇಹಿತನ ಪುತ್ರನ ಜೀವ ಉಳಿಸಿದರು. ಆ ಮೂಲಕ ಬೋನ್ ಮ್ಯಾರೋ ದಾನ ಮಾಡುವುದರಿಂದ ಯಾವುದೇ ಅಪಾಯವಿಲ್ಲ ಎಂದು ಇಡೀ ಜಗತ್ತಿಗೆ ಸಾರಿದರು.
ಒಟ್ಟಾರೆ ರೊನಾಲ್ಡೋ ಫುಟ್ಬಾಲ್ ಹೊರತಾಗಿಯೂ ಇಂತಹ ವಿಚಾರಗಳಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಿಜಕ್ಕೂ ರೊನಾಲ್ಡೋ ಜೀವನ ಇತರರಿಗೆ ಸ್ಪೂರ್ತಿ..

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ