ಬೆಂಗಳೂರು, ಜೂ.17-ಖಾಸಗಿ ಕೃಷಿ ಕಾಲೇಜು ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ಕ್ರಮ ವಿರೋಧಿಸಿ ಸಾಮೂಹಿಕವಾಗಿ ತರಗತಿಗಳನ್ನು ಬಹಿಷ್ಕರಿಸಿ ಜಿಕೆವಿಕೆ ಕೃಷಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಬೆಂಗಳೂರು ಕೃಷಿ ವಿವಿಯ ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ದೊಡ್ಡಬಳ್ಳಾಪುರ ರೈ ಟೆಕ್ನಾಲಜಿ ಮತ್ತು ಕನಕಪುರ ಹಾಗೂ ಚನ್ನಪಟ್ಟಣದ ಖಾಸಗಿ ಕೃಷಿ ಕಾಲೇಜುಗಳಿಗೆ ಮಾನ್ಯತೆ ನೀಡಬೇಕೆಂದು, ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಒತ್ತಾಯಿಸಿರುವುದನ್ನು ಖಂಡಿಸಿ ಜಿಕೆವಿಕೆಯ ವಿದ್ಯಾರ್ಥಿಗಳ ಸಂಘಟನೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಇದೇ 19 ರಂದು ಟೌನ್‍ಹಾಲ್ ಮುಂಭಾಗ ಧರಣಿ ನಡೆಸಲು ಮುಂದಾಗಿದೆ.
ಕರ್ನಾಟಕದಲ್ಲಿ ಸುಮಾರು ಐದು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಅಡಿಯಲ್ಲಿ ಪ್ರತಿ ಜಿಲ್ಲೆಗೆ ಒಂದು ಸರ್ಕಾರವೇ ಕಾಲೇಜುಗಳನ್ನು ತೆರೆಯಬೇಕೆಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಖಾಸಗಿಯವರು ಕೃಷಿ ಸಂಶೋಧನೆ ಮತ್ತು ಶಿಕ್ಷಣಕ್ಕೆ ಪ್ರವೇಶಿಸಿದರೆ ರೈತರಿಗೆ ಹೆಚ್ಚು ಅನಾನುಕೂಲವಾಗಲಿದೆ. ಕೃಷಿ ಶಿಕ್ಷಣವನ್ನು ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸಬಾರದು. ಆದುದರಿಂದ ದೊಡ್ಡಬಳ್ಳಾಪುರದಲ್ಲಿ ನಿರ್ಮಿತವಾಗುತ್ತಿರುವ ರೈ ಟೆಕ್ ಖಾಸಗಿ ಕೃಷಿ ಕಾಲೇಜನ್ನು ಕೂಡಲೇ ಮುಚ್ಚಿಸಬೇಕು. ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ಸಂಪೂರ್ಣವಾಗಿ ಖಾಸಗಿ ಕೃಷಿ ಕಾಲೇಜುಗಳನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.