ಬಿನ್ನಿಪೇಟೆ ವಾರ್ಡ್‍ಗೆ ನಾಳೆ ಮರು ಚುನಾವಣೆ

 

ಬೆಂಗಳೂರು, ಜೂ.17- ಬಿಬಿಎಂಪಿ ಸದಸ್ಯೆ ಮಹದೇವಮ್ಮ ನಾಗರಾಜ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ತೆರವಾಗಿದ್ದ ಬಿನ್ನಿಪೇಟೆ ವಾರ್ಡ್‍ಗೆ ನಾಳೆ ಮರು ಚುನಾವಣೆ ನಡೆಯಲಿದೆ.
ಪ್ರಮುಖ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಬಿನ್ನಿಪೇಟೆ ವಾರ್ಡ್‍ನಲ್ಲಿ ಜೆಡಿಎಸ್‍ನಿಂದ ಮಹದೇವಮ್ಮ ನಾಗರಾಜ್ ಅವರ ಪುತ್ರಿ ಐಶ್ವರ್ಯ, ಕಾಂಗ್ರೆಸ್‍ನಿಂದ ವಿದ್ಯಾ ಹಾಗೂ ಬಿಜೆಪಿಯಿಂದ ಚಾಮುಂಡೇಶ್ವರಿ ಅಖಾಡಕ್ಕೆ ಇಳಿದಿದ್ದಾರೆ.

ಕಾಂಗ್ರೆಸ್ ಸದಸ್ಯೆ ಆಗಿದ್ದ ಮಹದೇವಮ್ಮ ನಿಧನದ ನಂತರ ಪುತ್ರಿ ಐಶ್ವರ್ಯ ಕೈ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಟಿಕೆಟ್ ನಿರಾಕರಿಸಿ ಬಿಬಿಎಂಪಿ ಮಾಜಿ ಸದಸ್ಯೆ ವಿದ್ಯಾ ಅವರಿಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಮುಖಂಡರ ಈ ಧೋರಣೆಯಿಂದ ಬೇಸತ್ತ ಮಹದೇವಮ್ಮ ಅವರ ಪತಿ ನಾಗರಾಜ್ ಅವರು ಜೆಡಿಎಸ್ ಸೇರ್ಪಡೆಗೊಂಡು ಆ ಪಕ್ಷದಿಂದಲೇ ತಮ್ಮ ಪುತ್ರಿಯನ್ನು ಅಖಾಡಕ್ಕೆ ಇಳಿಸಿದ್ದಾರೆ.
ಮೈತ್ರಿ ಪಕ್ಷಗಳ ನಡುವಿನ ಈ ತಿಕ್ಕಾಟವನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಬಿನ್ನಿಪೇಟೆಯಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸಿ ಸ್ಥಳೀಯ ಕಾರ್ಯಕರ್ತೆ ಚಾಮುಂಡೇಶ್ವರಿ ಅವರಿಗೆ ಟಿಕೆಟ್ ನೀಡಿದೆ.
ಬಿನ್ನಿಪೇಟೆಯಲ್ಲಿ ಗೆಲುವು ಸಾಧಿಸಲು ಮೂರು ಪಕ್ಷಗಳು ರಣತಂತ್ರ ರೂಪಿಸುತ್ತಿದ್ದು , ಬಹಿರಂಗ ಪ್ರಚಾರ ನಿನ್ನೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಇಂದು ಮನೆ ಮನೆಗಳಿಗೆ ತೆರಳಿ ಮತ ಯಾಚಿಸುತ್ತಿದ್ದಾರೆ.

ಐಶ್ವರ್ಯ ಅವರನ್ನು ಗೆಲ್ಲಿಸಿಕೊಂಡು ಟಿಕೆಟ್ ನಿರಾಕರಿಸಿದ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಲು ನಾಗರಾಜ್ ಶ್ರಮಿಸುತ್ತಿದ್ದರೆ ಕ್ಷೇತ್ರವನ್ನು ಬಿಟ್ಟು ಕೊಡದಿರಲು ತೀರ್ಮಾನಿಸಿರುವ ಕೈ ಅಭ್ಯರ್ಥಿ ವಿದ್ಯಾ ಅವರು ಬೀದಿ ಬೀದಿ , ಮನೆ ಮನೆ ಸುತ್ತುತ್ತಿದ್ದಾರೆ.
ಬಿಬಿಎಂಪಿ ಮತ್ತು ಸರ್ಕಾರದಲ್ಲಿ ಮೈತ್ರಿ ಪಕ್ಷಗಳಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್‍ನಲ್ಲೇ ಮುಸುಕಿನ ಗುದ್ದಾಟ ಆರಂಭವಾಗಿರುವುದನ್ನು ಬಂಡವಾಳ ಮಾಡಿಕೊಂಡು ಬಿನ್ನಿಪೇಟೆಯಲ್ಲಿ ಬಿಜೆಪಿ ಬಾವುಟ ಹಾರಿಸಲು ಚಾಮುಂಡೇಶ್ವರಿ ಸನ್ನದ್ಧರಾಗಿದ್ದಾರೆ.
ಒಟ್ಟಾರೆ ಮೂರು ಪಕ್ಷಗಳ ನಡುವೆ ಬಿರುಸಿನ ಹೋರಾಟ ಕಂಡು ಬಂದಿದ್ದು , ಈ ಬಾರಿ ಬಿನ್ನಿಪೇಟೆ ಮತದಾರ ಐಶ್ವರ್ಯ ಅವರಿಗೆ ಅನುಕಂಪದ ಆಧಾರದ ಮೇಲೆ ಮತ ನೀಡುವರೋ, ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಅವರ ಕೈ ಹಿಡಿಯುವರೋ ಅಥವಾ ಚಾಮುಂಡೇಶ್ವರಿಗೆ ಜೈ ಎನ್ನುವರೋ ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ